



ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಸರ್ಕಾರಿ ಕಟ್ಟಡದ ಯೋಜನ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಕಪಾಟಿನಲ್ಲಿ 2.1 ಕೋಟಿ ರೂ. ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲಮಾಳಿಗೆಗೆ ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್‌ಕೇಸ್‌ನಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಆರ್‌ಬಿಐ 2,000 ರೂ. ಕರೆನ್ಸಿ ಚಲಾವಣೆ ಹಿಂತೆಗೆದುಕೊಂಡ ದಿನ ಈ ಘಟನೆ ನಡೆದಿದೆ. ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಏಳು ಮಂದಿ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಯಾರ ಹಣ? ಹೇಗೆ ಬಂತು ಎಂದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಘಟನೆಯ ಬಳಿಕ ಪ್ರತಿಪಕ್ಷವಾದ ಬಿಜೆಪಿ ಈ ವಿಷಯದ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿದೆ. ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಇದು ಗೆಹ್ಲೋಟ್ ಸರ್ಕಾರ ಭ್ರಷ್ಟಾಚಾರದ ರಕ್ಷಕ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.