

ಮಂಗಳೂರು/ಉಡುಪಿ:** ರಾಜ್ಯದಲ್ಲೇ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾದ ಕರಾವಳಿಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ನೀಡಿದೆ. ಸಾಮಾನ್ಯ ಪ್ರಮಾಣಕ್ಕಿಂತ ಗಣನೀಯವಾಗಿ ಕಡಿಮೆ ಮಳೆಯಾಗಿರುವುದರಿಂದ ರೈತರು ಬೆಳೆ ಹಾಗೂ ನೀರಾವರಿ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 1ರಿಂದ ಜುಲೈ 19ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.39ರಷ್ಟು ಮಳೆ ಕೊರತೆ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯಲ್ಲಿ 1,929.8 ಮಿ.ಮೀ. ಮಳೆಯಾಗಬೇಕಿದ್ದರೆ ಕೇವಲ 1,174.9 ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 2,203.4 ಮಿ.ಮೀ. ಸಾಮಾನ್ಯ ಮಳೆಯ ಬದಲಿಗೆ 1,348.2 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಎರಡೂ ಜಿಲ್ಲೆಗಳು ಶೇ.39ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿವೆ.
ವಿಶೇಷವಾಗಿ ಭತ್ತದ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಪ್ರಮುಖವಾದ ಜೂನ್ ತಿಂಗಳಲ್ಲೇ ಮಳೆ ಕೈಕೊಟ್ಟಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಜೂನ್‌ನಲ್ಲಿ ದಕ್ಷಿಣ ಕನ್ನಡದಲ್ಲಿ ಶೇ.57, ಉಡುಪಿ ಜಿಲ್ಲೆಯಲ್ಲಿ ಶೇ.50 ಮಳೆ ಕೊರತೆ ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಪುತ್ತೂರು ತಾಲೂಕಿನಲ್ಲಿ ಅತ್ಯಧಿಕ ಶೇ.48 ಮಳೆ ಕೊರತೆ ದಾಖಲಾಗಿದೆ. ಬಳಿಕ ಬಂಟ್ವಾಳ ಮತ್ತು ಮಂಗಳೂರು ತಲಾ ಶೇ.45, ಮೂಡುಬಿದಿರೆ ಶೇ.44, ಬೆಳ್ತಂಗಡಿ ಶೇ.43, ಉಳ್ಳಾಲ ಶೇ.37, ಕಡಬ ಶೇ.27 ಹಾಗೂ ಸುಳ್ಯ ಶೇ.26 ಮಳೆ ಕೊರತೆಯನ್ನು ದಾಖಲಿಸಿವೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಭತ್ತ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆ, ನೀರಿನ ಲಭ್ಯತೆ ಹಾಗೂ ಮುಂದಿನ ಕೃಷಿ ಚಟುವಟಿಕೆಗಳ ಕುರಿತು ರೈತರು ತೀವ್ರ ಚಿಂತೆಯಲ್ಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.