



ಮಂಗಳೂರು: ಬ್ಯಾಂಕ್ ಗೆ ಹಣ ಹಾಕಲು ಹೋಗುತ್ತಿದ್ದ ವ್ಯಕ್ತಿಯನ್ನು ನಾಲ್ವರ ತಂಡವೊಂದು ತಡೆದು ಹಲ್ಲೆ ನಡೆಸಿ 4.20 ಲಕ್ಷ ರೂ. ದೋಚಿದ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಊರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.28 ರಂದು ನಗರದ ಮಣ್ಣಗುಡ್ಡೆ ಆಶೀರ್ವಾದ್ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭೋಜಪ್ಪ ಅವರು ಮಧ್ಯಾಹ್ನ ಸಾರಸ್ವತ್ ಬ್ಯಾಂಕಿಗೆ ಹಣ ಹಾಕಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಮಂದಿಯ ತಂಡ ಭೋಜಪ್ಪ ಅವರನ್ನು ತಡೆದು
ಬ್ಯಾಟಿನಿಂದ ಹಲ್ಲೆ ನಡೆಸಿ 4.20 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಲಶೇಖರ ಮೂಲದ ಶ್ಯಾಂಶಂಕರ್ ಎಂಬಾತ ತನ್ನೊಂದಿಗೆ ಮೂವರನ್ನು ಸೇರಿಸಿಕೊಂಡು ಸೆ.13ರಿಂದ ಈ ಕೃತ್ಯಕ್ಕೆ ಯೋಜನೆಗಳನ್ನು ರೂಪಿಸಿ ಸೆ.26ರಂದು ಕೃತ್ಯವೆಸಗಲು ಪ್ರಯತ್ನಿಸಿದ್ದು, ಈ ಕಾರ್ಯದಲ್ಲಿ ವಿಫಲರಾಗಿ ಸೆ.28 ರಂದು ಹಲ್ಲೆ ನಡೆಸಿ ಹಣವನ್ನು ದೋಚಿದ್ದಾರೆ.
ಪೆಟ್ರೋಲ್ ಬಂಕ್‌ನಲ್ಲಿ ನೌಕರನಾಗಿದ್ದ ಶಕ್ತಿನಗರ ನಿವಾಸಿ ಶ್ಯಾಮ್ ಶಂಕರ್, ಮುಂಬೈನ ಬಾರೊಂದರಲ್ಲಿ ಮ್ಯಾನೇಜರ್ ಆಗಿದ್ದ, ಕುಡುಪು ನಿವಾಸಿ ಅಭಿಷೇಕ್ ಯಾನೇ ಅಭಿ, ಪೈಟಿಂಗ್ ಕೆಲಸಕ್ಕೆ ಮಾಡುತ್ತಿದ್ದ ಶಕ್ತಿನಗರ ನಿವಾಸಿಗಳಾದ ಕಾರ್ತಿಕ್ ಮತ್ತು ಸಾಗರ್ ಬಂಧಿತರು. ಇದರಲ್ಲಿ ಮೊದಲನೆ ಆರೋಪಿಯ ಮೇಲೆ 6, ಎರಡನೇ ಆರೋಪಿಯ ಮೇಲೆ 7 ಹಾಗೂ ಮೂರನೇ ಆರೋಪಿಯ ಮೇಲೆ 6 ಕೇಸ್ ಮೊದಲೇ ದಾಖಲಾಗಿದೆ ಎಂದರು.
ಈ ಸಂದರ್ಭ ಭೋಜಪ್ಪ ಅವರಿಗೆ ಕಿವಿಗೆ ಹಾಗೂ ತಲೆಗೆ ಗಾಯಗಳಾಗಿದ್ದು, ಕಿವಿಯಿಂದ ರಕ್ತ ಬಂದಿದೆ. ಎಂದಿನಂತೆ ಸೈಡ್ ಬ್ಯಾಗಿನಲ್ಲಿ ಹಣವನ್ನು ಇರಿಸಿ ಬ್ಯಾಂಕಿಗೆ ಕಟ್ಟಲು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದರು.
ದರೋಡೆ ಬಳಿಕ ನಾಲ್ವರು ಮುಂಬೈಗೆ ಪರಾರಿಯಾಗಿದ್ದರು. ಅಲ್ಲಿ ಕೆಲವರಿಗೆ ನೀಡಬೇಕಾಗಿದ್ದ ಹಣ ನೀಡಿದ್ದು, ಉಳಿದ ಮೊತ್ತದಲ್ಲಿ ಮೊಬೈಲ್, ಚಿನ್ನ ಖರೀದಿಸಿದ್ದು, ಹುಡುಗಿಯರಿಗಾಗಿಯೂ ಉಪಯೋಗಿಸಿದ್ದಾರೆ. ಸದ್ಯ ಆರೋಪಿಗಳಿಂದ 60 ಸಾವಿರ ರೂ. ಹಾಗೂ ಎರಡು ವಾಹನ, ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.