



. ++++++++++++++++ ಇನ್ನು ಸಾಧ್ಯವೇ ಇಲ್ಲ. ಮುಗಿದೇ ಹೋಯ್ತು ಅಂತ ಅನಿಸಿದ ಕ್ಷಣದಲ್ಲೂ ಪುಟಿದೇಳಬಲ್ಲ ಶಕ್ತಿಯೊಂದು ನಮ್ಮೊಳಗಿದೆ. +++++++++++++++++
ಹೀರೋನನ್ನು ಹತ್ತಾರು ರೌಡಿಗಳು ಸೇರಿ ಹಿಗ್ಗಾಮುಗ್ಗಾ ಹೊಡೆದು ಹಾಕಿರ್ತಾರೆ. ಖಳನಾಯಕನ ರಣಕೇಕೆ. ಮುಖ ತುಂಬ ರಕ್ತ ಮೆತ್ತಿಕೊಂಡು ಸತ್ತೇ ಹೋದ ರೀತಿಯಲ್ಲಿ ಮಲಗಿದ್ದಾನೆ ಹೀರೊ. ಆಗ ಒಮ್ಮೆಗೇ ಎಲ್ಲಿಂದಲೋ ಒಂದು ಗಂಟೆ ಸದ್ದು ಕೇಳ್ತದೆ ಅಥವಾ ಜೋರಾಗಿ ಗಾಳಿ ಬೀಸ್ತದೆ. ಇಲ್ಲವೇ ಪ್ರೇಯಸಿ ಜೋರಾಗಿ ಅವನ ಹೆಸರು ಹಿಡಿದು ಕರೀತಾಳೆ. ಆಗ ಜೀವಚ್ಛವದಂತೆ ಮಲಗಿದ್ದ ಆತ ನಿಧಾನಕ್ಕೆ ಕಣ್ಣು ಬಿಡ್ತಾ ಎದ್ದು ನಿಲ್ತಾನೆ. ಆಮೇಲೆ, ವಿರೋಧಿ ಗ್ಯಾಂಗ್ ಪೀಸ್ ಪೀಸ್!
ಸಿನಿಮಾದಲ್ಲಿ ಈ ಸೀನ್ ಗಳನ್ನು ನೋಡುವಾಗ ಇದೆಲ್ಲ ಬರೀ ಬಂಡಲ್. ಆಗೋ ಹೋಗೋ ಮಾತಾ ಅಂತ ಗಂಭೀರವಾಗಿ ವಿಮರ್ಶೆ ಮಾಡ್ತೇವೆ ಅಲ್ವಾ? ಅಷ್ಟು ಪೆಟ್ಟು ತಿಂದವನು ಎದ್ದು ನಿಲ್ಲೋಕೆ ಸಾಧ್ಯಾನಾ? ಅದೂ ಒಂದು ಸಣ್ಣ ಗಾಳಿಯ ಸೋಂಕಿಗೆ, ಹೆಣ್ಣಿನ ಧ್ವನಿಗೆ... ಅಂತ ಚರ್ಚೆ ಮಾಡ್ತೇವೆ. ಹಾಗನಿಸೋದು ಸಹಜವೆ. ಆದರೆ, ಎದ್ದು ಬಂದು ಹತ್ತಾರು ಜನರನ್ನು ಒಬ್ಬನೇ ಹೊಡೆಯುವ ಸೀನ್ ಬಿಟ್ಟರೆ ಉಳಿದದ್ದು ಘಟಿಸಬಹುದಾದ ವಿದ್ಯಮಾನವೇ ಅನಿಸ್ತದೆ.
ಇನ್ನೊಂದು ಉದಾಹರಣೆ ನೋಡಿ. ಸ್ವತಃ ನೀವೇ ಬ್ಯಾಡ್ಮಿಂಟನೋ, ಟೆನಿಸೊ ಆಡ್ತಾ ಇದೀರಿ ಅಂತ ಇಟ್ಕೊಳ್ಳಿ. ನಮ್ಮ ಎದುರಾಳಿ ಬಲಾಢ್ಯನಾಗಿದ್ದರೆ ಅತ್ತಿಂದಿತ್ತ ಓಡಾಡಿ ಎರಡೇ ನಿಮಿಷದಲ್ಲಿ ಕಾಲು ಸೋತು ಸುಣ್ಣವಾಗಿ ಇನ್ನು ಒಂದು ಹೆಜ್ಜೆಯೂ ಇಡಲಾಗದಷ್ಟು ಸುಸ್ತಾಗಿ ಹೋಗ್ತೇವೆ. ಬಾಯಿ ಮಾತ್ರವಲ್ಲ, ಗಂಟಲೂ ಒಣಗಿ ಹೈರಾಣಾಗಿರ್ತೇವೆ. ಬೆವರು ಕಿತ್ತುಕೊಂಡು ಬಂದಿರ್ತದೆ. ಮಾತೂ ಬಾರದೆ ಊಫ್ ಊಫ್ ಅಂತೇವೆ. ಹಾಗಿದ್ರೆ ಅಲ್ಲಿಗೆ ಮುಗೀತಾ?
ಇಲ್ಲವೇ ಇಲ್ಲ... ಇಂಥ ಸಂದರ್ಭದಲ್ಲಿ ಸಣ್ಣದಾಗಿ ನಾಲ್ಕು ಬಾರಿ ಶ್ವಾಸ ಎಳೆದುಕೊಂಡರೆ ಸಾಕು ಒಂದೇ ನಿಮಿಷದಲ್ಲಿ ಮತ್ತದೇ ಚೈತನ್ಯದೊಂದಿಗೆ ಎದ್ದು ನಿಲ್ಲುವಂತಾಗ್ತದೆ. ನಮಗೇ ಆಶ್ಚರ್ಯ ಆಗ್ತದೆ... ಒಂದು ನಿಮಿಷದ ಹಿಂದೆ ಅಸಹಾಯಕನಾಗಿದ್ದ ಅದು ನಾನೇನಾ? ಅಂತ.
ಇದು ಹೇಗೆ ಸಾಧ್ಯ? ನಾವು ವಿಪರೀತ ದಣಿವಿನ ಕೆಲಸ ಮಾಡಿದಾಗ, ನಮ್ಮ ದೇಹದ ಜೀವಕೋಶಗಳು ಒಮ್ಮೆಗೇ ಆಮ್ಲಜನಕದ ಪೂರೈಕೆ ಕೊರತೆಯಿಂದ ಬಸವಳಿಯುತ್ತವೆ. ಆಗ ಎಲ್ಲ ಕಡೆಯೂ ಸುಸ್ತಾದಂತೆ ಅನಿಸ್ತದೆ. ಒಮ್ಮೆ ಆಟವನ್ನು ನಿಲ್ಲಿಸಿದಾಗ ಉಸಿರಾಟದ ಅಷ್ಟೂ ಆಮ್ಲಜನಕ ನೇರವಾಗಿ ಜೀವಕೋಶಗಳಿಗೆ ಸೇರಿಕೊಳ್ಳುವುದರಿಂದ ಒಮ್ಮೆಗೇ ಚೈತನ್ಯ ಪುಟಿದೇಳುತ್ತದೆ.
ಸಿನಿಮಾದ ನಾಯಕ ಎದ್ದು ನಿಲ್ಲುವುದಕ್ಕೆ ಕೂಡಾ ಇದೇ ಮಾದರಿಯ ಶಕ್ತಿ ಕೆಲಸ ಮಾಡ್ತದೆ. ಆತನಿಗೆ ಬಿದ್ದುಕೊಂಡ ಅವಧಿಯೂ ಒಂದು ಸಣ್ಣ ರೆಸ್ಟಿಂಗ್ ಪಿರಿಯೆಡ್. ಆ ಕ್ಷಣದಲ್ಲಿ ವಿಪರೀತ ಭಯಕ್ಕೆ ಒಳಗಾಗದೆ, ನಿರಾಳವಾಗಿದ್ದರೆ ಮತ್ತೆ ಎದ್ದು ನಿಲ್ಲೋದಕ್ಕೆ ಅವಕಾಶ ಖಂಡಿತ ಸಿಗ್ತದೆ.
ಹಾಗಿದ್ದರೆ, ನಾಯಕಿಯ ಧ್ಚನಿ ಹೇಗೆ ಕೆಲಸ ಮಾಡ್ತದೆ? ಇಲ್ಲಿ ಹೆಣ್ಣಿನ ಧ್ವನಿ ಎನ್ನುವುದು ಒಂದು ಪ್ರೇರಣೆಯ ಸಂಕೇತ. ಮಾಡಬೇಕಿರುವ ಕೆಲಸವನ್ನು ನೆನಪಿಸುವ ಒಂದು ಜಾಗೃತಿಯ ಹಾಗೆ. ಪ್ರೀತಿ, ಸೆಂಟಿಮೆಂಟ್ ಮೊದಲಾದ ಅಂಶಗಳು ಇದಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಬಹುದು.
ಇದು ದೈಹಿಕವಾದ ಸಂಗತಿ ಆಯಿತು. ನಮಗೆ ಮಾನಸಿಕವಾಗಿ ಘಾಸಿಯಾದಾಗಲೂ ಹೀಗೆಯೇ ಆಗ್ತದೆ. ವಸ್ತುಶಃ ಕುಸಿದೇ ಹೋಗ್ತೇವೆ. ಏನು ಮಾಡ್ಲಿಕೂ ಕೈಕಾಲು ಆಡದಂಥ, ಒಂಥರಾ ಮೆದುಳೇ ಸತ್ತುಹೋಗಿದ್ಯೇನೋ ಎಂಬಂಥ ಸ್ಥಿತಿ. ಒಂದು ಅರ್ಥದಲ್ಲಿ ಇಲ್ಲಿ ಆಗುವುದು ಕೂಡಾ ಅದೇ. ಅಸಹಾಯಕ ಸಂದರ್ಭದಲ್ಲಿ ನಾವು ಉಸಿರಾಡುವುದನ್ನು ಕೂಡಾ ಮರೆತಿರ್ತೇವೆ. ಖಿನ್ನತೆ, ವಿಷಾದಗಳದೇ ಪಾರಮ್ಯ. ಆಗ ನಿಜಕ್ಕೂ ದೇಹ ಆಮ್ಲಜನಕದ ಕೊರತೆಯಿಂದ ಬಲವನ್ನೇ ಕಳೆದುಕೊಳ್ತದೆ. ಮನಸು, ಮೆದುಳು ಯಾವುದೂ ಕೆಲಸಕ್ಕೆ ಸಿಗುವುದಿಲ್ಲ.
ಇಂಥ ಸಂಕಷ್ಟದ ಸಮಯದಲ್ಲೂ ನಮ್ಮನ್ನು ಪಾರು ಮಾಡಬಲ್ಲ ಶಕ್ತಿ ಇರುವುದು ನಮ್ಮ ನಿರಾಳ ಉಸಿರಾಟ ಮತ್ತು ಪಾಸಿಟೀವ್ ಚಿಂತನೆಗೆ.
ಕಷ್ಟಗಳು ಎದುರಾದಾಗ ನಾವು ಸಾಧ್ಯವಾದಷ್ಟು ಮಟ್ಟಿಗೆ ನಿರಾಳವಾಗಿರಲು ಪ್ರಯತ್ನಿಸಬೇಕು ಮತ್ತು ಸ್ನೇಹಿತರು, ಬಂಧುಗಳಲ್ಲಿ ಆತ್ಮೀಯರ ಜತೆ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಅನ್ನೋದು ಇದಕ್ಕೇನೆ. ನಿರಾಳವಾದಾಗ ಯಾವುದೋ ಒಂದು ಪರಿಹಾರ ನಮಗೇ ಹೊಳೆಯಬಹುದು. ಅಥವಾ ನಮ್ಮ ಆತ್ಮೀಯರಿಗೊಂದು ಸೊಲ್ಯುಷನ್ ಸಿಕ್ಕಿಬಿಡಬಹುದು.
ಒಟ್ಟಾರೆ ಸಾರಾಂಶ ಇಷ್ಟೆ. ಕೈ ಸೋತಿತು ಅನಿಸಿದಾಗ, ಇನ್ನು ಸಾಧ್ಯವೇ ಇಲ್ಲ ಅನಿಸಿದಾಗ, ಬೇರೆ ದಾರಿಯೇ ಇಲ್ಲ ಅನಿಸಿದಾಗಲೂ ಸುಮ್ಮನೆ ಕೆಲವು ನಿಮಿಷ ತಣ್ಣಗೆ ಇದ್ದುಬಿಡಿ, ದಾರಿ ಕಂಡೀತು. -------------ಕೃಷ್ಣ ಭಟ್ ಅಳದಂಗಡಿ , ಪತ್ರಕರ್ತರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.