



ಕಾರ್ಕಳ: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೈಲೂರು ಗಾಂಧಿ ಸ್ಮಾರಕ ಭವನವನ್ನು ೧೯೫೨ ರಲ್ಲಿ ಆಗಿನ ದಾನಿಗಳ ದೇಣಿಗೆಯಿಂದ ನಿರ್ಮಾಣವಾಗಿದ್ದು ಇದನ್ನು ಯಥಾಸ್ಥಿತಿ ಉಳಿಸುವಂತೆ ಸಾರ್ವಜನಿಕರು ಅ. ೬ರಂದು ನೀರೆ ಗ್ರಾಮ ಪಂಚಾಯತ್‌ಗೆ ತೆರಳಿ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಪ್ರಭುರವರಿಗೆ ಮನವಿಯನ್ನು ನೀಡಿದರು.
ಸುಮಾರು ೭೧ ವರ್ಷಗಳಿಂದ ಈ ಕಟ್ಟಡವು ಸುಸ್ಥಿತಿಯಲ್ಲಿದ್ದು ಹಲವಾರು ಸಾರ್ವಜನಿಕ ಪೂರಕವಾದ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು, ಇದರೊಂದಿಗೆ ಪಶು ವೈದ್ಯಕೀಯ ಶಿಬಿರ, ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ನಾಯಿಗಳಿಗೆ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳು ಇಲ್ಲಿ ನಡೆದಿದೆ. ಅಲ್ಲದೆ ಬೈಲೂರು, ಕೌಡೂರು , ನೀರೆ. ಯರ್ಲಪಾಡಿ, ಕಣಂಜಾರು ಈ ಗ್ರಾಮಗಳ ಸಾರ್ವಜನಿಕರು ಸೇರಿಕೊಂಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚಿಸಿಕೊಂಡು ಆ ಮೂಲಕ ಸುಮಾರು ೪೩ ವರ್ಷಗಳಿಂದ ನಿರಂತರ ಎರಡು ದಿನಗಳ ಕಾಲ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನೂ ಆಚರಿಸಿಕೊಂಡು ಬರುತ್ತಿದೆ. ಆದರೆ ಇದೀಗ ಈ ಸ್ಮಾರಕ ಭವನವನ್ನು ನೀರೆ ಗ್ರಾಮ ಪಂಚಾಯತ್ ಏಕಾಏಕಿ ಕೆಡವಿ ಹೊಸ ಪಂಚಾಯತ್ ಕಚೇರಿಯನ್ನು ನಿರ್ಮಿಸುವ ನಿರ್ಣಯ ಕೈಗೊಂಡಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿಕೊಂಡು ಈ ಸ್ಮಾರಕ ಭವನವನ್ನು ಯಾವುದೇ ಕಾರಣಕ್ಕೂ ಕೆಡವದೆ ಅದರ ಮೇಲ್ಛಾವಣಿಯನ್ನು ದುರಸ್ಥಿಗೊಳಿಸಿ ಯಥಾಸ್ಥಿತಿ ಈ ಕಟ್ಟಡವನ್ನು ಉಳಿಸಿಕೊಂಡು ಹಾಗೂ ಇದಕ್ಕೆ ಹೊಂದಿಕೊಂಡಿರುವ ಖಾಲಿ ಸ್ಥಳವನ್ನು ಸಾರ್ವಜನಿಕರಿಗೆ ಈ ಹಿಂದಿನಂತೆಯೇ ಉಪಯೋಗಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಸಕ್ತ ಗಣೇಶೋತ್ವವ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಕೃಷ್ಣ ಶೆಟ್ಟಿ, ಸಚ್ಚಿದಾನಂದ ಪ್ರಭು, ಗುರುರಾಜ ಮಾಡ, ಮಹೇಶ್ ಮಾಡ, ಸುಧೀರ್ ಶೆಟ್ಟಿ, ಸುರೇಶ್ ಶೆಟ್ಟಿ, ಸ್ಥಳೀಯರಾದ ದಿಲೀಪ್ ಶೆಟ್ಟಿ, ಮಹಾವೀರ್ ರಾಣೆ, ರಾಜೇಂದ್ರ ಶೆಟ್ಟಿ, ನವೀನ್ ಭಂಡಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.