



ಉಳ್ಳಾಲ: ದಕ್ಷಿಣ ಕನ್ನಡದ ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ಸಂದರ್ಭ ಬಟ್ಟೆಗೆ ಸಾಂಬಾರು ಚೆಲ್ಲಿದ ಕಾರಣಕ್ಕೆ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಬ್ಬರ ನಡುವೆ ಜಗಳ ನಡೆದಿದ್ದು, ವಿದ್ಯಾರ್ಥಿಯೊಬ್ಬನ ಎದೆಗೆ ಮತ್ತೊಬ್ಬ ವಿದ್ಯಾರ್ಥಿ ಚಾಕು ಇರಿದ ಘಟನೆ ವರದಿಯಾಗಿದೆ.
ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಮಧ್ಯಾಹ್ನ ಊಟದ(Lunch Time)ವೇಳೆ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದಕ್ಕೆ ಪ್ರತಿಯಾಗಿ ಬಟ್ಟೆಯಲ್ಲಿ ಕಲೆ ಆಗಿದ್ದಕ್ಕೆ ಕುಪಿತನಾದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಅದು ಸಾಲದೆಂಬಂತೆ ಆತನ ನೋಟ್ ಪುಸ್ತಕವನ್ನ ಸಾಂಬಾರಿಗೆ ಹಾಕಿ ತರಗತಿಯಿಂದ ಹೊರ ಹೋಗಿದ್ದಾನೆ.ಹೊಡೆಸಿಕೊಂಡ ವಿದ್ಯಾರ್ಥಿ ಬ್ಯಾಗ್ ನಿಂದ ಹರಿತವಾದ ಚೂರಿಯನ್ನು ತೆಗೆದು ಹಲೆಗೈದವನ ಮೇಲೆ ಎಸೆದಿದ್ದಾನೆ ಎನ್ನಲಾಗಿದೆ.ಆದರೆ, ಶಾಲೆಗೆ ಹೋಗುವ ವಿದ್ಯಾರ್ಥಿಯ ಬ್ಯಾಗಿನಲ್ಲಿ ಚಾಕು ಹೇಗೆ ಬಂತು ಎನ್ನುವುದೇ ಸದ್ಯ ಯಕ್ಷ ಪ್ರಶ್ನೆಯಾಗಿದೆ. ಈ ಘಟನೆಯ ದೃಶ್ಯಾವಳಿಗಳು ಶಾಲಾ ತರಗತಿ ಕೊಠಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.
ಎಸೆದ ಭರದಲ್ಲಿ ವಿದ್ಯಾರ್ಥಿಯ ಬಲ ಎದೆ ಭಾಗದ ಪಕ್ಕಕ್ಕೆ ಚೂರಿ ಚುಚ್ಚಿದ್ದು ಗಾಯಗೊಂಡ ವಿದ್ಯಾರ್ಥಿಯನ್ನು ಕೂಡಲೇ ವೈಸ್ ಪ್ರಿನ್ಸಿಪಾಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಪರಿಣಾಮ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಂಘರ್ಷ ಇಬ್ಬರು ವಿದ್ಯಾರ್ಥಿಗಳು ಅಲ್ಪ ಸಂಖ್ಯಾತ ಸಮುದಾಯದವರಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿ ಚಾಕುವಿನಿಂದ ಸಹಪಾಠಿಯ ಮೇಲೆ ದಾಳಿ ನಡೆಸಿದ್ದು ಆಘಾತಕಾರಿ ಸಂಗತಿ.
ಈ ಘಟನೆಯ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಧನ್ಯ ನಾಯಕ್, ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಅವರನ್ನೊಳಗೊಂಡ ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ಕುರಿತಂತೆ ಮಕ್ಕಳ ನ್ಯಾಯಾಲಯಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಪೋಲಿಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.