



ಕಳೆದ ಹನ್ನೊಂದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಗೌಡ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಶೀಘ್ರ ಬಂಧನಕ್ಕಾಗಿ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟ ಹಲವು ಆಯಾಮಗಳನ್ನು ಪಡೆದುಕೊಂಡಿದೆ.
ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಒಡನಾಡಿ ಸಂಸ್ಥೆಯೊಂದಿಗೆ ಜಿಲ್ಲೆಯ ನಾಗರೀಕ ಸಮಾಜ ಒಟ್ಟಾಗಿ ಹೋರಾಟಕ್ಕೆ ಬಲ ನೀಡಿದ್ದು, ದೇವಾಲಯ, ದೈವಸ್ಥಾನ, ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ, ವಾಹನ ಜಾಥಾ, ಪ್ರತಿಭಟನಾ ಸಭೆಗಳು ನಡೆಯುತ್ತಿವೆ. ಈ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು, ಪುರುಷರು ಪಡೆದಿರುವ ಸಾಲದ ಬಡ್ಡಿ ಮರುಪಾವತಿ ಮಾಡುವುದಿಲ್ಲ ಎನ್ನುವ ಕೂಗೊಂದು ಕೇಳಿಬಂದಿದೆ.
ಒಂದೆರಡು ದಿನಗಳ ಹಿಂದೆ ಅಹೋರಾತ್ರ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಕರೆ ನೀಡಿದ್ದು, ಇದಕ್ಕೆ ದನಿಯಾಗುವಂತೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸುರೇಂದ್ರ ಎಂಬವರು ಸಾಮಾಜಿಕ ಜಾಲತಾಣದಲ್ಲಿ “ತಾನು ಸಂಘದ ಬಡ್ಡಿ,ಅಸಲು ಕಟ್ಟುವುದಿಲ್ಲ,ಸೌಜನ್ಯಳಿಗೆ ನ್ಯಾಯ ಸಿಕ್ಕಿದ ಬಳಿಕ ಮರುಪಾವತಿ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಸುರೇಂದ್ರರ ಮನೆಗೆ ತೆರಳಿ ಮನವೊಲಿಸಲು ಪ್ರಯತ್ನಿಸಿದ್ದು,ಪಡೆದಿರುವ ಸಾಲದ ಮೊತ್ತವನ್ನು ಬಡ್ಡಿ ಸಮೇತ ತೀರಿಸಲು ತಿಳಿಸಿದ್ದರು ಎನ್ನಲಾಗಿದೆ. ಇದಾದ ಬೆನ್ನಲ್ಲೇ ವಿಡಿಯೋ ಮತ್ತಷ್ಟು ವೈರಲ್ ಆಗುತ್ತಿದ್ದಂತೆ ಫೋನ್ ಮೂಲಕ ಬೆದರಿಕೆ ಕರೆಗಳು ಬರಲು ಆರಂಭಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಲವತ್ತುಕೊಂಡಿದ್ದಾರೆ.
ಸದ್ಯ ಬೆದರಿಕೆಗೆ ಬಗ್ಗುವುದಿಲ್ಲ, ಕುಮಾರಿ ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ವರೆಗೂ ಸಾಲ ಮರುಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಕರೆ, ಬೆದರಿಕೆ ಸಂದೇಶಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.