



ಭಾರಿ ಒಳ್ಳೆಯ ಪ್ಲಾನ್, ಆದರೇನು ಮಾಡೋಣ? ++++++++++++++++++++++++ ನಾವೆಲ್ಲ ಪ್ಲ್ಯಾನ್ ಮಾಡೋದ್ರಲ್ಲಿ ಎತ್ತಿದ ಕೈ. ನಮಗೆ ಮಾತ್ರ ಅಲ್ಲ, ಇನ್ನೊಬ್ರಿಗೂ ಹೇಳಿ ಕೊಡ್ತೇವೆ. ಆದರೆ ಅದನ್ನು ಎಷ್ಟು ಅನುಷ್ಠಾನ ಮಾಡ್ತೇವೆ? ++++++++++++++++++++++++
ಒಂದು ಕೆಲಸದ ಯಶಸ್ಸಿಗೆ ಪ್ಲ್ಯಾನಿಂಗ್ ಅನ್ನೋದು ತುಂಬಾನೇ ಮುಖ್ಯ. ಮನೆ ಕಟ್ಟೋದಕ್ಕೂ ಮೊದಲು ಸಿದ್ಧಪಡಿಸೋದು ಪ್ಲ್ಯಾನೆ. ಮೂಲ ಯೋಜನೆ ಸರಿ ಇದ್ರೆ ಕೆಲಸ ತುಂಬ ಚೆನ್ನಾಗಿ ಆಗ್ತದೆ ಅಂತ ಹೇಳ್ತಾರೆ.
ಓದೋದಕ್ಕೆ ಪ್ಲ್ಯಾನ್ ಮಾಡ್ಕೊಳ್ಳಿ, ಬರೆಯೋದ್ರ ಬಗ್ಗೆ ಪ್ಲ್ಯಾ ಇರಲಿ ಅಂತ ಸಣ್ಣ ವಯಸ್ಸಲ್ಲೇ ಮಕ್ಕಳಿಗೆ ಹೇಳ್ತೇವೆ. ಮದುವೆಗೂ ಪ್ಲ್ಯಾನ್, ನಂತ್ರ ಮಕ್ಕಳಾಗೋಕೂ ಪ್ಲ್ಯಾನ್, ಈಗೀಗ ಊಟ ತಿಂಡಿಗೂ ಪ್ಲ್ಯಾನ್. ಹಣಕಾಸಿನ ವಿಚಾರ ಬಂದಾಗಲಂತೂ ತಲೆಯಲ್ಲಿ ತುಂಬಿಕೊಳ್ಳಲಾರದಷ್ಟು ಪ್ಲ್ಯಾನ್ಸ್. ಬದುಕು ಪ್ಲ್ಯಾನ್ಡ್ ಆಗಿದ್ದಾಗ ಮಾತ್ರ ಒಳ್ಳೆ ಜೀವನ ಅಂತ ನಾವೆಲ್ಲ ನಂಬಿದ್ದೇವೆ.
ಅದೇ ಕಾರಣಕ್ಕಿರಬಹುದು. ನಾವು ಇತ್ತೀಚೆಗೆ ಎಲ್ಲವನ್ನೂ ತುಂಬ ಚೆನ್ನಾಗಿ ಪ್ಲ್ಯಾನ್ ಮಾಡೋದ್ರಲ್ಲಿ ತಜ್ಞರಾಗಿ ಬಿಟ್ಟಿದ್ದೇವೆ. ದಿನದ ಯೋಜನೆಗಳು, ತಿಂಗಳಿದ್ದು, ವರ್ಷದ್ದು ಹೀಗೆ... ಓದಿಗೆ, ಬರಹಕ್ಕೆ, ವ್ಯಾಯಾಮಕ್ಕೆ, ಪ್ರವಾಸಕ್ಕೆ ಹೀಗೆ ಎಲ್ಲದಕ್ಕೂ ಸ್ಕೆಚ್ ರೆಡಿ ಇಟ್ಕೊಂಡಿರ್ತೇವೆ.
ಆದರೆ ಅದನ್ನು ಜಾರಿಗೆ ತರುತ್ತೇವಾ? ಹೆಚ್ಚಿನ ಸಂದರ್ಭದಲ್ಲಿ ಇಲ್ಲ!
ಒಳ್ಳೆಯ ಪ್ಲ್ಯಾನಿಂಗ್ ಮಾಡೋದು ನಿಜಕ್ಕೂ ಬುದ್ಧಿವಂತಿಕೆಯೆ. ಎಲ್ಲ ವಿಚಾರಗಳನ್ನು ಪರಿಗಣಿಸಿ ಯೋಜನೆ ರೂಪಿಸ್ಬೇಕು. ಅದು ಒಂದು ಕಚೇರಿಯ, ಗುಂಪಿನ ಪ್ಲ್ಯಾನ್ ಆಗಿದ್ದರಂತೂ ಎಲ್ಲರ ಶಕ್ತಿ, ದೌರ್ಬಲ್ಯ, ವರ್ತನೆಗಳನ್ನು ಗಮನಕ್ಕೆ ತಂದುಕೊಳ್ಳಬೇಕು.
ಆದರೆ, ಏನೇ ಪ್ಲ್ಯಾನ್ ಮಾಡಿದರೂ ಅದರ ನಿಜವಾದ ಯಶಸ್ಸಿರುವುದು ಅದರ ಅನುಷ್ಠಾನದಲ್ಲಿ. ಭಾರಿ ಒಳ್ಳೆಯ ಪ್ಲ್ಯಾನ್ ಮಾಡಿ ಜಾರಿಗೆ ತರಲಾಗದಿದ್ದರೆ ಲಾಭ ಏನೂ ಇಲ್ಲ.
ನಮ್ಮ ಸಮಸ್ಯೆ ಏನೂ ಅಂದ್ರೆ ನಾವು ಬದುಕಿನ ಬಗ್ಗೆ ಪ್ಲ್ಯಾನ್ ಮಾಡಿಕೊಳ್ಳುವಾಗ ಯಾರನ್ನೋ ಕಾಪಿ ಮಾಡಲು ಹೋಗ್ತೇವೆ. ಯಾರೋ ತುಂಬ ಚಂದ ಹಾಡಿದ್ದನ್ನು ಕೇಳಿ ನಾವೂ ಹಾಡ್ಬೇಕು ಅಂದುಕೊಳ್ತೇವೆ. ಅದಕ್ಕಾಗಿ ಎಲ್ಲಿದೆ ಸಂಗೀತ ಕ್ಲಾಸ್ ಅಂತ ಹುಡುಕೋ ಪ್ಲ್ಯಾನ್ ಚೆನ್ನಾಗಿ ಮಾಡ್ತೇವೆ. ಕ್ರಿಕೆಟ್, ವ್ಯಾಯಾಮ, ಓದು, ಬರಹ... ಹೀಗೆ ಎಲ್ಲವೂ ಪ್ರಭಾವಿತವೆ.
ನಮಗೇನು ಬೇಕು, ನಮ್ಮಿಂದ ಏನು ಸಾಧ್ಯ? ನಮ್ಮ ಇತಿ-ಮಿತಿಗಳೇನು ಅಂತ ಅರ್ಥ ಮಾಡಿಕೊಂಡು ಏನು ಮಾಡಬಹುದು ಅಂತ ಯೋಚಿಸೋರು ಕಡಿಮೆ.
ಹೀಗಾಗಿ ನಮ್ಮ ಪ್ಲ್ಯಾನ್ ಗಳಲ್ಲಿ ಹೆಚ್ಚಿನವು ಕೈಗೂಡದ ಕನಸುಗಳಾಗಿಯೇ ಉಳಿಯುತ್ತವೆ.
ಇನ್ನು ತುಂಬ ವಿಚಾರಗಳಲ್ಲಿ ಪ್ಲ್ಯಾನಿಂಗ್ ಚೆನಾಗಿರ್ತದೆ, ಅದನ್ನು ಜಾರಿ ಮಾಡೋ ತಾಕತ್ತೂ ಇರ್ತದೆ. ಆದರೆ ಮನಸು ಕಾರ್ಯಕ್ಕೆ ಇಳಿಯೋದಿಲ್ಲ. ಅದಕ್ಕೇ ತಿಳಿದವರು ಹೇಳ್ತಾರಲ್ಲ... ನಮಗೆ ಯಾವುದೇ ವಿಚಾರದ ಬಗ್ಗೆ ಜ್ಞಾನ ಇದ್ದರೆ ಸಾಲದು. ಅದನ್ನು ಅನ್ವಯಗೊಳಿಸುವ ಶಕ್ತಿಯೂ ಇರಬೇಕು ಅಂತ.
ಅಂದ್ರೆ ನಾವು ಹಾಗ್ಮಾಡ್ಬೇಕು, ಹೀಗ್ಮಾಡ್ಬೇಕು ಅಂತ ಯೋಚನೆ ಮಾಡೋದಷ್ಟೇ ಮುಖ್ಯ ಅಲ್ಲ. ನೆಲಕ್ಕಿಳಿದು ಆ ಕೆಲಸ ಮಾಡಬೇಕು. ಆಗ ಮಾತ್ರ ಅದು ಯಶಸ್ಸು ಅನಿಸೋದು.
ಅಬ್ದುಲ್ ಕಲಾಂ ಅವರು ಹೇಳಿದ ಮಾತು ಎಲ್ಲರಿಗೂ ಗೊತ್ತು: ಕನಸು ಎಂದರೆ ನಿದ್ದೆಯಲ್ಲಿರುವಾಗ ಬೀಳುತ್ತಲ್ವಾ? ಅದಲ್ಲ. ಯಾವುದು ನಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ... ಅದು ನಿಜವಾದ ಕನಸು. ಹಾಗೇನೆ ಒಳ್ಳೆಯ ಪ್ಲ್ಯಾನ್ ಅಂದರೆ ನಾವು ಪೇಪರ್ ಮೇಲೆ ಬರೆದು ಇಟ್ಟಿರ್ತೇವಲ್ಲ... ಅದಲ್ಲ. ಯಾವುದನ್ನು ನಿಜದಲ್ಲಿ ಜಾರಿಗೆ ತರ್ತೇವಲ್ಲ.. ಅದು ಪ್ಲ್ಯಾನ್. ಅದು ದೊಡ್ಡದೇ ಆಗಿರಬೇಕು ಅಂತ ಏನಿಲ್ಲ... ಸಣ್ಣದಾದರೂ ಆದೀತು. ಜಾರಿ ಆಗಬೇಕು ಅಷ್ಟೆ.
---------------ಕೃಷ್ಣ ಭಟ್ ಅಳದಂಗಡಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.