



ಬಂಟ್ವಾಳ ತಾಲೂಕಿನ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಬಳಿ ಫಲ್ಗುಣಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಕ್ಕಿಪಾಡಿ ಗ್ರಾಮದ ಏರೋಡಿ ನಿವಾಸಿ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿಯಲಾಗಿದೆ.
ಶನಿವಾರ ರಾತ್ರಿ 9 ಗಂಟೆಗೆ ಅವರು ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟು ಬಳಿಕ ನಾಪತ್ತೆ ಯಾಗಿದ್ದರು. ಆ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆ ಮೇಲೆ ಇವರ ದ್ವಿಚಕ್ರ ವಾಹನ ಮಾತ್ರ ದೊರೆತಿದ್ದು, ಅಗ್ನಿಶಾಮಕದಳ ಆಗಮಿಸಿ ಹುಡುಕಾಡಿದ್ದರು. ಕಳೆದ ಏಳು ವರ್ಷಗಳ ಹಿಂದೆ ನಿರ್ಮಾಣಗೊಂಡ ಬಹುಗ್ರಾಮ ಕುಡಿಯುವ ನೀರಿನ ಅಣೆಕಟ್ಟೆ ಬಳಿ ರವಿವಾರ ಮೃತದೇಹ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಹಣ ದುಪ್ಪಟ್ಟುಗೊಳಿಸುವ ಆಪ್ ವೊಂದರಲ್ಲಿ 21 ಲಕ್ಷ ರೂ. ಮೊತ್ತದ ಹಣ ಕಳೆದುಕೊಂಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಅವರು ದೂರು ಸಲ್ಲಿಸಿದ್ದರು. ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಅವರು ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. ಮಕ್ಕಳು ಇಲ್ಲ ಎಂಬ ಕೊರಗು ಜೊತೆಗೆ ಆರ್ಥಿಕ ಸಂಕಷ್ಟದಿಂದ ಇವರು ಕೈಗೊಂಡ ದುಡುಕಿನ ನಿರ್ಧಾರದಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಮೂಡಿಸಿದೆ.
ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ ಐ ಭಾರತಿ ನೇತೃತ್ವದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.