


ಮುಂಬಯಿಯ ಅಜೆಕಾರು ಕಲಾಭಿಮಾನಿ ಬಳಗವು ಯಕ್ಷಗುರು ಮತ್ತು ಕಲಾ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಯಕ್ಷಗಾನ ಶಿಕ್ಷಣ, ಪ್ರದರ್ಶನ, ಸರಣಿ ತಾಳಮದ್ದಳೆ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ಕಲಾವಿದರ ಸಮ್ಮಾನ, ಗ್ರಂಥ ಪ್ರಕಟಣೆ ಇತ್ಯಾದಿ ವಿಧಾಯಕ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿದೆ. ಇದೀಗ ಬಳಗವು ತನ್ನ 'ರಜತ ಪರ್ವ' ಸಮಾರಂಭದ ಪ್ರಯುಕ್ತ ಆಯೋಜಿಸಿರುವ 2 ದಿನಗಳ 'ಮುಂಬಯಿ ಯಕ್ಷಗಾನ ಸಮ್ಮೇಳನ 2026 2 2026 5 ಮತ್ತು 4ರಂದು ಮುಂಬೈ ಕುರ್ಲಾದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಬಂಟರ ಭವನದಲ್ಲಿ ನಿರ್ಮಿಸಲಾಗುವ ದಿ। ಕಲ್ಲಾಡಿ ವಿಠಲ ಶೆಟ್ಟಿ ಪ್ರಾಂಗಣದಲ್ಲಿ ನಡೆಯಲಿರುವುದು. ಯಕ್ಷಗಾನ ಕಲಾಪೋಷಕ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್ ಸಮ್ಮೇಳನಾಧ್ಯಕ್ಷರಾಗಿರುವರು.
ಸಮ್ಮೇಳನ ಉದ್ಘಾಟನೆ ಮತ್ತು ಗ್ರಂಥ ಬಿಡುಗಡೆ:
ಅಕ್ಟೋಬರ 3ರಂದು ಶನಿವಾರ ಬೆಳಿಗ್ಗೆ ಯಕ್ಷಗಾನದ 'ಕೇಳಿ' ಬಾರಿಸುವ ಮೂಲಕ ಮುಂಬೈ ನಗರದ ಖ್ಯಾತ ಭಾಗವತರುಗಳಿಂದ ಯಕ್ಷಗಾಯನವಿದೆ. ಬಳಿಕ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಮತ್ತು ಅತಿಥಿ ಗಣ್ಯರನ್ನು ಛಂದೋಬ್ರಹ್ಮ ಡಾ.ಎನ್. ನಾರಾಯಣ ಶೆಟ್ಟಿ ಶಿಮಂತೂರು ಸಭಾಂಗಣಕ್ಕೆ ಕರೆತಂದು, ಆರ್.ಕೆ. ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರುವುದು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ವಿಧ್ಯುಕ್ತವಾಗಿ ಉದ್ಘಾಟಿಸುವರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಧಾನ ಸಂಪಾದಕರಾಗಿರುವ ಸಮ್ಮೇಳನದ ಸವಿ ಸಂಪುಟ 'ಯಕ್ಷಗಾನ ಮುಂಬೆಳಗು' ಗ್ರಂಥವನ್ನು ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಡಾ.ಕನ್ಯಾನ ಸದಾಶಿವ ಶೆಟ್ಟಿ ಬಿಡುಗಡೆಗೊಳಿಸುವರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿವಿಧ ಸಮಾಜದ ಗಣ್ಯರು, ಮಹನೀಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಮಾರೋಪ - ಪ್ರಶಸ್ತಿ ಪ್ರದಾನ: ಅಕ್ಟೋಬರ 4ರಂದು ಭಾನುವಾರ ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಮ್ಮೇಳನದ ಅವಲೋಕನ ನಡೆಸುವರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಡಾ.ಟಿ ಶ್ಯಾಮ ಭಟ್ಟರನ್ನು ಸನ್ಮಾನಿಸುವರು. ಗೌರವಾಧ್ಯಕ್ಷ ಡಾ.ಕನ್ಯಾನ ಸದಾಶಿವ ಶೆಟ್ಟಿ ಅವರು ಯಕ್ಷಗಾನ ರಂಗದ ಆಯ್ದ ಹಿರಿಯ ಸಾಧಕರಿಗೆ 'ಯಕ್ಷರಕ್ಷಾ ಪ್ರಶಸ್ತಿ ಪ್ರದಾನ' ಮಾಡುವರು. ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಗಳು: ಸಮ್ಮೇಳನದಲ್ಲಿ ಮಹತ್ವದ ಎಂಟು ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ವಿಸ್ತೃತ ಮಂಡಿಸುವರು. ಚರ್ಚೆಗಳು ನಡೆಯಲಿದ್ದು ಹಲವು ಮಂದಿ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿದ್ವಾಂಸರು ಗೋಷ್ಠಿ ನೀಡುವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.