



ತೆರೆಯ ಮೇಲಷ್ಟೇ ನಾವು ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋನೇ ಎಂದು ಇತ್ತೀಚಿನ ಘಟನೆಯೊಂದರಿಂದ ಟಾಲಿವುಡ್ ನಟ ನಾಗಶೌರ್ಯ ಪ್ರೂವ್ ಮಾಡಿದ್ದಾರೆ. ನಡುರಸ್ತೆಯಲ್ಲಿ ಯುವತಿಗೆ ಹೊಡೆದ ಲವರ್‌ಗೆ ಇದೀಗ ನಟ ನಾಗಶೌರ್ಯ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿನಿಮಾ ತಮ್ಮ ಖಾಸಗಿ ಜೀವನ ಅಂತಾ ನಟ-ನಟಿಯರು ಬ್ಯುಸಿಯಿರುತ್ತಾರೆ. ಇತರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ನಾಗಶೌರ್ಯ ಇದೀಗ ಮಾಡಿರುವ ಕೆಲಸ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿಷ್ಟೇ ಹೀರೋ ಅಲ್ಲ, ತೆರೆ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ನಟ ಪ್ರೂವ್ ಮಾಡಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದರು. ಆಗ ಯುವಕ, ಯುವತಿ ಮೇಲೆ ಕೈ ಮಾಡಿದ್ದಾನೆ. ಇದನ್ನು ಕಂಡು ಸಿಟ್ಟಿಗೆದ್ದ ನಾಗ ಶೌರ್ಯ, ಕಾರಿನಿಂದ ಇಳಿದಿದ್ದಾರೆ. ಯುವತಿ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಆ ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಹುಡುಗ, ನಾನು ಆಕೆಯ ಲವರ್ ಎಂದು ಸಬೂಬು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಟ, ಲವರ್ ಆಗಿಬಿಟ್ಟರೆ, ಆಕೆಯ ಮೇಲೆ ಕೈ ಮಾಡಬಹುದಾ ಕ್ಷಮೆ ಕೇಳು ಎಂದು ಯುವಕನ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಆ ಹುಡುಗನಿಗೆ ನಟ ಜೋರು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಆರಂಭದಲ್ಲಿ ಈ ವಿಡಿಯೋ ವೈರಲ್ ಆದಾಗ, ನಟ ನಾಗ ಶೌರ್ಯ ಅವರು ನಡುರಸ್ತೆಯಲ್ಲಿ ಯಾರೋ ಯುವಕನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಸತ್ಯಾಸತ್ಯತೆ ಗೊತ್ತಾದ ಮೇಲೆ ನಾಗ ಶೌರ್ಯ ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಇನ್ನೂ, ಆ ಯುವಕನ ಪರವಾಗಿ ಮಾತನಾಡಿರುವ ಆ ಯುವತಿ, ಏನೋ ಆಗಿದ್ದು ಆಗಿದೆ, ಬಿಟ್ಟುಬಿಡಿ ಎಂದು ಕೇಳಿಕೊಂಡರು ಎನ್ನಲಾಗಿದೆ. ಅಲ್ಲಿದ್ದವರು ಕೂಡ ಆ ಯುವಕನಿಗೆ ಕ್ಷಮೆ ಕೇಳುವಂತೆ ಪಟ್ಟುಹಿಡಿದಿದ್ದರು. ಒಟ್ಟಾರೆ ನಟ ನಾಗಶೌರ್ಯ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಮಹಿಳೆಯರಿಗೆ ನಾಗಶೌರ್ಯ ಗೌರವಿಸುವ ರೀತಿಯನ್ನ ಫ್ಯಾನ್ಸ್ ಮೆಚ್ಚಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.