


ನವದೆಹಲಿ: ದೀಪಾವಳಿ ಹಬ್ಬದ ಎರಡನೇ ದಿನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಮುಂಜಾನೆ ನಗರದಾದ್ಯಂತ ದಟ್ಟ ಹೊಗೆ ಹಾಗೂ ಮಂಜು ಆವರಿಸಿದ್ದು, ಇಡೀ ನಗರವೇ ಹೊಗೆಯ ಮಡುವಿನಲ್ಲಿ ಮುಳುಗಿದಂತೆ ಕಂಡುಬಂದಿದೆ.
ದಟ್ಟ ಹೊಗೆ ಮತ್ತು ಮಂಜಿನ ವಾತಾವರಣದಿಂದಾಗಿ ಮುಂಜಾನೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮೀರ್ (Sameer) ಆ್ಯಪ್ ನೀಡಿರುವ ಮಾಹಿತಿಯ ಪ್ರಕಾರ, ನವೆಂಬರ್ 8ರ ರಾತ್ರಿ 11.05ರ ವೇಳೆಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 373ರಷ್ಟಿದ್ದು, ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಸೋಮವಾರ ಮುಂಜಾನೆಯಾಗುತ್ತಿದ್ದಂತೆ ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ ಗಡಿ ದಾಟಿದೆ.
ದೆಹಲಿಯ ಸುತ್ತಮುತ್ತಲಿನ ನಗರಗಳಲ್ಲಿಯೂ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗಿದೆ. ನೋಯ್ಡಾದಲ್ಲಿ 319, ಗಾಜಿಯಾಬಾದ್‌ನಲ್ಲಿ 360, ಗುರುಗ್ರಾಮ್‌ನಲ್ಲಿ 280 ಹಾಗೂ ಫರಿದಾಬಾದ್‌ನಲ್ಲಿ 297 ಎಕ್ಯೂಐ ದಾಖಲಾಗಿದೆ.
ಇನ್ನು ದೆಹಲಿಯ ಆಲಿಪುರ, ಬವಾನಾ, ಬುರ್ವಾರಿ, ಚಾಂದಿನಿ ಚೌಕ್, ಮುಂಡ್ಕಾ, ಪಂಜಾಬಿ ಬಾಗ್, ರೋಹಿಣಿ ಹಾಗೂ ವಿವೇಕ್ ವಿಹಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ ಗಡಿ ದಾಟಿ ತೀವ್ರ ಕಳಪೆ ಮಟ್ಟ ತಲುಪಿದೆ. ಸೋಮವಾರ ಮುಂಜಾನೆ ಸುಮಾರು 4.20ರ ವೇಳೆಗೆ ಈ ಪ್ರಮಾಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇಂದರ್ಲೋಕ್ ಪ್ರದೇಶವೂ ದಟ್ಟ ಹೊಗೆಯಿಂದ ಆವೃತವಾಗಿದ್ದು, ವಾಹನ ಸವಾರರಿಗೆ ಗೋಚರತೆ ಗಣನೀಯವಾಗಿ ಕಡಿಮೆಯಾಗಿತ್ತು.
ಒಟ್ಟಿನಲ್ಲಿ, ದೀಪಾವಳಿ ಸಂಭ್ರಮದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿರುವುದು ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.