


ಮಂಗಳೂರು: ವಿವಿಧ ಧರ್ಮಗಳಿಗೆ ಸೇರಿದ ಯುವಕ-ಯುವತಿಯರ ಗುಂಪಿಗೆ ಹೊಟೇಲ್‌ನಲ್ಲಿ ರೌಡಿ ಹಿನ್ನೆಲೆಯ ವ್ಯಕ್ತಿಗಳು ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಒಳಗೊಂಡ ಗುಂಪು ಹೊಟೇಲ್‌ನಲ್ಲಿ ಕುಳಿತಿದ್ದ ವೇಳೆ ಕೆಲವರು ಅಲ್ಲಿಗೆ ಬಂದು ಅವರನ್ನು ಪ್ರಶ್ನಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಯುವಕರು ಹೊಟೇಲ್‌ನಿಂದ ಹೊರಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಬಳಿಕ ಪೊಲೀಸರು ಹೊಟೇಲ್‌ಗೆ ತೆರಳಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿಗೆ ದೂರು ನೀಡುವಂತೆ ಸೂಚಿಸಿದ್ದರು. ಆದರೆ ಯುವತಿ ಹಾಗೂ ಆಕೆಯ ತಂದೆ ದೂರು ನೀಡಲು ನಿರಾಕರಿಸಿದ್ದಾರೆ. ಹೊಟೇಲ್ ಮಾಲೀಕರೂ ದೂರು ನೀಡಲು ಮುಂದೆ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಹೊಟೇಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ. ದೃಶ್ಯಾವಳಿಗಳಲ್ಲಿ ಕಂಡುಬಂದ ವ್ಯಕ್ತಿಗಳು ಯುವಕ-ಯುವತಿಯರನ್ನು ತಡೆದು ನಿಲ್ಲಿಸಿರುವುದು ಹಾಗೂ ವಾಗ್ವಾದ ನಡೆಸಿರುವುದನ್ನು ಆಧರಿಸಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಸಿಸಿಟಿವಿಯಲ್ಲಿ ಆಡಿಯೋ ಲಭ್ಯವಿಲ್ಲದ ಕಾರಣ, ಬೆದರಿಕೆಯ ನಿಖರ ಸ್ವರೂಪವನ್ನು ದೃಶ್ಯಾವಳಿಗಳ ಆಧಾರದ ಮೇಲೆಯೇ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಯುವತಿಯ ತಂದೆ ಹಾಗೂ ಹೊಟೇಲ್ ಮಾಲೀಕರು ಹೆಚ್ಚಿನ ಜವಾಬ್ದಾರಿ ವಹಿಸಿ ಪೊಲೀಸರಿಗೆ ದೂರು ನೀಡಲು ಮುಂದೆ ಬರಬೇಕಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಮುಂಜಾಗ್ರತಾ ಕ್ರಮದಡಿ ಬಾಂಡ್‌ಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.