



ಕಾರ್ಕಳ : ಆಧುನಿಕತೆಯ ಭರಾಟೆಯಲ್ಲಿ ಸಾಹಿತ್ಯ ನಮ್ಮ ಮನದಿಂದ ದೂರಾಗುವ ಸಾಧ್ಯತೆ ಇಂದು ದಟ್ಟವಾಗಿ ಕಾಣುತ್ತದೆ. ಸಾಹಿತ್ಯವೆಂಬುದು ಕೇವಲ ಸಾಹಿತ್ಯರಚನೆಗಳನ್ನು ಓದುವುದಲ್ಲ ಬದಲು ಬದುಕನ್ನು ನೇರ್ಪುಗೊಳಿಸುವ ಶ್ರೇಷ್ಠ ಮಾಧ್ಯಮ. ಸಾಹಿತ್ಯ ಬದುಕಿಗೆ ಸೌಂದರ್ಯವನ್ನೂ, ಮನಸ್ಸಿಗೆ ಸುಖವನ್ನು ನೀಡುವಂತದ್ದಾಗಿದೆ. ಸಾಹಿತ್ಯ ಪಠ್ಯೇತರ ಚಟುವಟಿಕೆಯಾದರೂ ಪಠ್ಯ ಚಟುವಟಿಕೆಯಂತೆ ಪೂರಕವಾದುದಾಗಿದೆ. ಒಳ್ಳೆಯದನ್ನು ಬದುಕಲ್ಲಿ ಅಳವಡಿಸಿಕೊಂಡರೆ ಮನೋಸ್ಥಿತಿ ಅತ್ಯುತ್ತಮವಾಗುವುದರಲ್ಲಿ ಸಂದೇಹವಿಲ್ಲವೆಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ.ಕೋಟ್ಯಾನ್ ಅವರು ಹೇಳಿದರು. ಅವರು ಕಾಲೇಜಿನ ಸಾಹಿತ್ಯಸಂಘದ ಪ್ರಸಕ್ತಸಾಲಿನ ಸಾಹಿತ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಮಾತನಾಡುತ್ತಾ ಸಾಹಿತ್ಯದ ಓದು ಎಂದರೆ ಅರಿವಿನ ಅನುಸಂಧಾನವೆನ್ನುತ್ತಾರೆ. ಅರಿವಿನ ಅನುಸಂಧಾನದಿಂದಾಗಿ ವ್ಯಕ್ತಿತ್ವದಲ್ಲಿ ಧನಾತ್ಮಕತೆ , ಲೋಕಜ್ಞಾನ ಒಡಮೂಡುತ್ತದೆ ಎಂದರು.
ಸಾಹಿತ್ಯ ಸಂಘದ ಕಾರ್ಯದರ್ಶಿ ಸೌರಭ್ ಶೆಣೈ ಸೂರ್ಯನ ಕುರಿತು ವಿದ್ಯಾರ್ಥಿ ಉಪನ್ಯಾಸ ನೀಡಿದರು. ಕುಮಾರಿ ಭೂಮಿಕಾ ಕಾಮತ್ ವಾರದ ಭಾವಗಾನ ಕಾರ್ಯಕ್ರಮ ನಡೆಸಿಕೊಟ್ಟರು.
ಸಾಹಿತ್ಯಸಂಘದ ಸಂಯೋಜಕರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಅರುಣಕುಮಾರ ಎಸ್. ಆರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತ್ಯ ಸಂಘದ ಇನ್ನೋರ್ವ ಕಾರ್ಯದರ್ಶಿ ಕು. ದಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯಸಂಘದ ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ಸ್ವಾಗತಿಸಿದರು. ಕು. ಪಾವನಾ ವಂದಿಸಿದರು. ಕು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.