


ಮಾಸ್ಕೋ:** ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿರುವ ಆರೋಪ ಕೇಳಿಬಂದಿದೆ. ಪತಿಯನ್ನು ಬಿಡುಗಡೆಗೊಳಿಸಿ ನೆರವು ನೀಡುವಂತೆ ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
ನೋಯ್ಡಾದ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚಂದನ್ ಗುಪ್ತಾ ಅವರನ್ನು ಪೊಲೀಸರು ರಾತ್ರಿ 12.30ರ ಸುಮಾರಿಗೆ ಕರೆದೊಯ್ದಿದ್ದಾರೆ ಎಂದು ಪತ್ನಿ ಸ್ನೇಹ ಗುಪ್ತಾ ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ತಮ್ಮ ಪತಿ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಅವರನ್ನು ಕರೆದೊಯ್ದು ಕಿರುಕುಳ ನೀಡುತ್ತಿದ್ದಾರೆ. ರಷ್ಯಾದ ಸ್ಥಳೀಯ ಭಾಷೆ ತಿಳಿಯದ ಕಾರಣ ತಾವು 10 ವರ್ಷದ ಮಗುವಿನೊಂದಿಗೆ ಸಂಕಷ್ಟದಲ್ಲಿದ್ದೇವೆ. ಕೂಡಲೇ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಇದೇ ವೇಳೆ, ರಷ್ಯಾದಲ್ಲಿ ಜನರನ್ನು ಬಲವಂತವಾಗಿ ಸೇನೆಗೆ ಸೇರಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಸ್ನೇಹ ಗುಪ್ತಾ ಮಾಡಿದ್ದಾರೆ.
ಘಟನೆ ಕುರಿತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯಿಸಿದ್ದು, ಇದು ಕಾನೂನು ಸಂಬಂಧಿತ ವಿಷಯವಾಗಿದ್ದು, ರಷ್ಯಾ ಸರ್ಕಾರ ಪ್ರಕರಣವನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ. ಅಲ್ಲದೆ, ಬಂಧಿತ ವ್ಯಕ್ತಿಗೆ ಕಾನ್ಸುಲರ್ ಪ್ರವೇಶ ನೀಡುವಂತೆ ಕೋರಿರುವುದಾಗಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.