



ಮಣಿಪಾಲ ಶಿವಪಾಡಿ ದೇಗುಲದಲ್ಲಿ ಶ್ರೀ ಉಮಾಮಹೇಶ್ವರ ದೇಗುಲದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶರಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಉಡುಪಿಯಲ್ಲಿ ಪ್ರಥಮ ಬಾರಿಗೆ ಫೆ. 22 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗವು ಮಾ.5ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.
ಮಾ.2 ರಂದು ಶತಚಂಡಿಕಾ ಯಾಗ ನಡೆಯಲಿದೆ. ಮಾ.2,3,4 ರಂದು ವಾರಾಣಸಿಯ ಗಂಗಾರತಿಯ ಮಾದರಿಯಲ್ಲಿ ಅತಿರುದ್ರ ಯಾಗ ಮಂಟಪದಲ್ಲಿ ವಾರಾಣಸಿಯಿಂದ ಆಗಮಿಸಿದ 8 ಮಂದಿಯ ತಂಡದಿಂದ ವಿಶೇಷ ಶಿವಾರತಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ.
ಮಾ.2 ರಂದು ಅಪರಾಹ್ನ 3ಕ್ಕೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಬೃಹತ್ ಹೊರಕಾಣಿಕೆ ಮೆರವಣಿಗೆಯು ಹೊರಡಲಿದ್ದು ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಶಿವಪಾಡಿ ದೇವಸ್ಥಾನದ ಮಾರ್ಗವಾಗಿ ದೇವಸ್ಥಾನವನ್ನು ತಲುಪುವುದು. ಈ ಮೆರವಣಿಗೆಯಲ್ಲಿ ಮಹಿಳೆಯರಿಂದ ಕಲಶ, ಚೆಂಡೆ ವಾದನ, ಭಜನೆ ತಂಡಗಳು, ವಿವಿಧ ವೇಷಭೂಷಣ, ಸ್ತಬ್ಧ ಚಿತ್ರಗಳು, ಕೀಲು ಕುದುರೆ, ಬ್ಯಾಂಡ್ ವಾದ್ಯ ಸಹಿತ ಇನ್ನಿತರ ತಂಡಗಳು ಭಾಗವಹಿಸಲಿವೆ.
ಮಾ.4ರ ಸಂಜೆ ದೇಗುಲಕ್ಕೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ವಿಶೇಷ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಂಜೆ 5:30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅನಂತರ ಸ್ವಾಮೀಜಿ ಅವರಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ. ಮಾ.5 ರಂದು ಯಾಗ ಮಂಟಪದಲ್ಲಿ ಬೆಳಿಗ್ಗೆ 6.30ರಿಂದ ಏಕಾದಶ ಕುಂಡಗಳಲ್ಲಿ ಅತಿ ರುದ್ರ ಮಹಾಯಾಗ, 11:30 ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ದೇವರಿಗೆ ಕಲಶಾಭಿಷೇಕ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ಸೀತಾ ರಸೋಯಿ ಪಾಕಶಾಲೆ ಇಲ್ಲಿ ಪರಿಣಿತ ಬಾಣಸಿಗರಿಂದ ಅಡುಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಲಘು ಉಪಾಹಾರ ಹಾಗೂ ರಾತ್ರಿ ಅನ್ನ ಪ್ರಸಾದವನ್ನು ಬಡಿಸಲಾಗುತ್ತಿದೆ.
ಅನ್ನಪ್ರಸಾದ ಪ್ರತಿನಿತ್ಯ ದೇಗುಲಕ್ಕೆ ದೂರದೂರಗಳಿಂದ ಭಕ್ತರ ಸಂಖ್ಯೆ ವೃದ್ಧಿಸುತ್ತಿದ್ದು, ದಿನವೊಂದಕ್ಕೆ ಸುಮಾರು 8ರಿಂದ 10 ಸಾವಿರ ಮಂದಿ ಭಕ್ತರು ಉಪಾಹಾರ ಸೇವಿಸುತ್ತಿದ್ದಾರೆ. ಪೂರ್ಣಾಹುತಿಯ ಹಿಂದಿನ ದಿನ (ಮಾ.4) ಮತ್ತು ಪೂರ್ಣಾಹುತಿಯ ದಿನ (ಮಾ.5) ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ.
ನಗರಾಲಂಕಾರ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಕೆಳ ಪರ್ಕಳದ ವಾಟರ್ ಟ್ಯಾಂಕ್ ನ ವರೆಗೆ ಮತ್ತು ಈಶ್ವರನಗರದಿಂದ ದೇಗುಲದ ವರೆಗೆ ಸುಮಾರು 3 ಕಿ.ಮೀ. ದೂರ ವರೆಗಿನ ರಸ್ತೆಯನ್ನು ಆಕರ್ಷಕವಾಗಿ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿ ವೇಳೆ ನೋಡುಗರಿಗೆ ಕಣ್ಣಿಗೆ ಹಬ್ಬವೋ ಎಂಬಂತೆ ಭಾಸವಾಗುತ್ತಿದೆ. ರಸ್ತೆಯ ಉದ್ದಗಲಕ್ಕೂ ಕೇಸರಿ ಬಣ್ಣದ ಪತಾಕೆಗಳು, ಬ್ಯಾನರ್ ಗಳು, ಗಮನ ಸೆಳೆಯುವ ಸ್ವಾಗತ ಕಮಾನುಗಳಿಂದ ಶೃಂಗರಿಸಲಾಗಿದೆ. ಭಕ್ತರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಈಶ್ವರ ನಗರದಲ್ಲಿ 32 ಅಡಿಯ ಬೃಹತ್ ಎಲ್ಇಡಿ ವಾಲ್ ಅಳವಡಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಸುಮಾರು 2 ಸಾವಿರ ವಾಹನಗಳ ಪಾರ್ಕಿಂಗ್ ಗೆ ವಿವಿಧ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೈಕ್ ಮತ್ತು ಕಾರು ನಿಲುಗಡೆಗೆ ಪ್ರತ್ಯೇಕ ಸ್ಥಳಾವಕಾಶ ಇದೆ. ಭಕ್ತರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.