


ಕಾರ್ಕಳ: ನಗರದ ಕೋರ್ಟ್ ರಸ್ತೆಯಲ್ಲಿರುವ ಕಾರ್ಕಳ ರೋಟರಿ ಬಾಲಭವನದಲ್ಲಿ ಕಾರ್ಯಕ್ರಮ ನಡೆಯುವಾಗಲೆಲ್ಲ ಮುಖ್ಯ ರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವುದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ. ಸಭಾಭವನದಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ನಡೆದರೂ, ಕಾರ್ಯಕ್ರಮಕ್ಕೆ ಆಗಮಿಸುವವರು ರಸ್ತೆಯ ಎರಡೂ ಬದಿಗಳಲ್ಲಿ ಮಾತ್ರವಲ್ಲದೆ ಜಂಕ್ಷನ್‌ನ ನಡುವೆಯೂ ಕಾರುಗಳನ್ನು ನಿಲ್ಲಿಸುತ್ತಿವುದೇ ಸಾರ್ವಜನಿಕರಿಗೆ ತಲೆನೋವಾಗಿದೆ.
ವಿಶೇಷವಾಗಿ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಹಾಗೂ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇರುವ ಅಲ್ಪ ಜಾಗದಲ್ಲಿಯೇ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕತ್ತಲಿನ ಸಂದರ್ಭದಲ್ಲಿ ರಸ್ತೆಯಲ್ಲಿ ನಿಂತಿರುವ ವಾಹನಗಳು ಗೋಚರಿಸದೆ ಅಪಘಾತ ಸಂಭವಿಸುವ ಆತಂಕವೂ ಎದುರಾಗಿದೆ.
ಬೇಕಾಬಿಟ್ಟಿ ಪಾರ್ಕಿಂಗ್‌ನಿಂದ ಉಂಟಾಗಿರುವ ಸಮಸ್ಯೆಗೆ ಇತ್ತೀಚಿನ ಘಟನೆಯೊಂದು ಸಾಕ್ಷಿಯಾಗಿದೆ. ಕತ್ತಲಿನಲ್ಲಿ ರಸ್ತೆಯ ಮಧ್ಯೆ ನಿಲ್ಲಿಸಿದ್ದ ಕಾರು ಕಾಣದೆ ಭುವನೇಂದ್ರ ಕಾಲೇಜು ಸಮೀಪ ಹಿರಿಯ ನಾಗರಿಕರೊಬ್ಬರು ಕಾರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.
"ರಸ್ತೆಯಲ್ಲಿ ನಿಲ್ಲಿಸಿರುವ ಕಾರುಗಳೆಲ್ಲ ರೋಟರಿ ಕ್ಲಬ್ ಸದಸ್ಯರು ಹಾಗೂ ಗಣ್ಯರಿಗೆ ಸೇರಿದವು ಎನ್ನಲಾಗುತ್ತದೆ. ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿದರೂ ಸಾರ್ವಜನಿಕರು ಅವರಿಗೆ ಹೆದರಿ ಸುಮ್ಮನಿರಬೇಕಾದ ಪರಿಸ್ಥಿತಿ ಇದೆ. ನಮ್ಮಂತಹ ಸಾಮಾನ್ಯ ಜನರ ಸಮಸ್ಯೆ ಕೇಳುವವರೇ ಇಲ್ಲ" ಎಂದು ಗಾಯಗೊಂಡ ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ದೊಡ್ಡ ಸಾರ್ವಜನಿಕ ವಾಹನಗಳು ಸಂಚರಿಸುವಾಗಲೂ ಬೇಕಾಬಿಟ್ಟಿ ಪಾರ್ಕಿಂಗ್‌ನಿಂದಾಗಿ ಮುಂದೆ ಸಾಗಲು ಸಾಕಷ್ಟು ಜಾಗ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮಾತ್ರವಲ್ಲದೆ ಜಂಕ್ಷನ್‌ನಲ್ಲಿಯೂ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿದೆ.
ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘನೆಗೂ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸ್ ಇಲಾಖೆ, ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವಾಹನ ನಿಲುಗಡೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದೇಕೆ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬಂದಿದೆ.

ಈ ರಸ್ತೆಯ ಮೂಲಕ ದುರ್ಗಾ, ಭುವನೇಂದ್ರ ಕಾಲೇಜು, ಮೀಯ್ಯಾರು, ಸ್ವರಾಜ್ಯ ಮೈದಾನ, ರಾಮಸಮುದ್ರ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರತಿದಿನ ನೂರಾರು ಮಂದಿ ಸಂಚರಿಸುತ್ತಾರೆ. ಹೀಗಾಗಿ ರಸ್ತೆಯಲ್ಲಿನ ಅಕ್ರಮ ಹಾಗೂ ಅಶಿಸ್ತಿನ ಪಾರ್ಕಿಂಗ್‌ಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಡೆಯಲು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಾರ್ಯಕ್ರಮ ಆಯೋಜಿಸುವ ಸಭಾಭವನದ ಆಡಳಿತ ಮಂಡಳಿಯೂ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.