


ಮಂಗಳೂರು:** ಬಡಗುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ವೇಷಧಾರಿ ಥಂಡಿಮನೆ ಶ್ರೀಪಾದ ಭಟ್ (62) ಅವರು ಗುರುವಾರ (ಅ.15) ಬೆಳಗಿನ ಜಾವ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ, ಪೆರ್ಡೂರು ಸೇರಿದಂತೆ ವಿವಿಧ ಬಯಲಾಟ ಮೇಳಗಳಲ್ಲಿ ವೇಷಧಾರಿಯಾಗಿ ಗುರುತಿಸಿಕೊಂಡಿದ್ದ ಶ್ರೀಪಾದ ಭಟ್ ಅವರು, ತಮ್ಮ ಗತ್ತು, ಗಾಂಭೀರ್ಯ ಮತ್ತು ಪ್ರಬುದ್ಧ ಅಭಿನಯದ ಮೂಲಕ ನಾಯಕ ಹಾಗೂ ಖಳನಾಯಕ ಎರಡೂ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು. ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಸಮರ್ಥ ಎರಡನೇ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರು.
ಕಳೆದ ಕೆಲಕಾಲದಿಂದ ತೀವ್ರ ಕಾಲುನೋವು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಮತ್ತೆ ಯಕ್ಷಗಾನ ರಂಗಕ್ಕೆ ಮರಳುವ ಮಹದಾಸೆ ಹೊಂದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಬಡಗುತಿಟ್ಟಿನ ಮೇರು ಕಲಾವಿದರ ಒಡನಾಡಿಯಾಗಿದ್ದ ಶ್ರೀಪಾದ ಭಟ್ ಅವರಿಗೆ ಪೌರಾಣಿಕ ಪ್ರಸಂಗಗಳ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವಿತ್ತು. ಆಳಂಗ, ಕಂಚಿನ ಕಂಠ, ಹಿತಮಿತವಾದ ಕುಣಿತ ಹಾಗೂ ಪಾತ್ರಕ್ಕೆ ತಕ್ಕ ಪರಿಪೂರ್ಣ ಅರ್ಥಗಾರಿಕೆ ಅವರ ಕಲಾಪ್ರತಿಭೆಯ ಪ್ರಮುಖ ವಿಶೇಷತೆಗಳಾಗಿದ್ದವು.
ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿದಂತೆ ಹಲವು ಪೌರಾಣಿಕ ಹಾಗೂ ನೂತನ ಪ್ರಸಂಗಗಳ ಪಾತ್ರಗಳಿಗೆ ಜೀವ ತುಂಬಿದ್ದರು. ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಮೃತರು ತಂದೆ, ತಾಯಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ ಥಂಡಿಮನೆಯಲ್ಲಿ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಥಂಡಿಮನೆ ಶ್ರೀಪಾದ ಭಟ್ ಅವರ ನಿಧನಕ್ಕೆ ಯಕ್ಷಗಾನ ರಂಗದ ಕಲಾವಿದರು, ಕಲಾಪ್ರೇಮಿಗಳು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.