



ನವದೆಹಲಿ: ಕೇಂದ್ರ ಸರ್ಕಾರವು ಅಕ್ಟೋಬರ್ ನಿಂದ ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಮಳೆಯ ಕೊರತೆಯ ಕಾರಣದಿಂದಾಗಿ ಕಬ್ಬು ಬೆಳೆ ಕಡಿಮೆ ಆಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಬಹುದು ಎಂದು ಸರ್ಕಾರದ ಮೂಲಗಳು ಹೇಳಿವೆ.
ಅಕ್ಟೋಬರ್ ನಿಂದ ಹೊಸ ಸಕ್ಕರೆ ಹಂಗಾಮು ಆರಂಭವಾಗುತ್ತದೆ. ಹೊಸ ಹಂಗಾಮಿಗೆ ಅನ್ವಯವಾಗುವಂತೆ ಸಕ್ಕರೆ ರಫ್ತು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತವು ಸಕ್ಕರೆ ರಫ್ತು ನಿಷೇಧಿಸಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ಹಣದುಬ್ಬರ ಹೆಚ್ಚಾಗುವ ಆತಂಕ ಇದೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ಕಬ್ಬು ಬೆಳೆಯುವುದರಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿ ಇವೆ. ಮಳೆ ಕಡಿಮೆ ಆಗಿರುವ ಕಾರಣ ಅಕ್ಟೋಬರ್ 1ರಿಂದ ಶುರುವಾಗುವ ಹೊಸ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆ ತಗ್ಗಬಹುದು. ಅಲ್ಲದೆ, 2024–25ರ ಹಂಗಾಮಿನಲ್ಲಿ ಕಬ್ಬು ಬೆಳೆಯುವ ಪ್ರಮಾಣ ಕೂಡ ಕಡಿಮೆ ಆಗಬಹುದು ಎಂದು ಉದ್ಯಮದ ಮೂಲಗಳು ಹೇಳಿವೆ.
ದೇಶದಲ್ಲಿ ಸಕ್ಕರೆ ಬೆಲೆಯು ಈ ವಾರದಲ್ಲಿ ಏರಿಕೆ ಕಂಡಿದೆ. ‘ಸಕ್ಕರೆಯ ಬೆಲೆಯಲ್ಲಿ ಈಚೆಗೆ ಆಗಿರುವ ಏರಿಕೆಯು, ರಫ್ತಿಗೆ ಅವಕಾಶ ನೀಡುವ ಸಾಧ್ಯತೆಯನ್ನು ಇಲ್ಲವಾಗಿಸಿದೆ’ ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ. 2023–24ನೆಯ ಹಂಗಾಮಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇ 3.3ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.
ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತಿಗೆ ಕೇಂದ್ರವು ಈಗಾಗಲೇ ನಿಷೇಧ ಹೇರಿದೆ. ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.