



ಮಂಗಳೂರು: ಬ್ಯಾಂಕ್ ಆಫ್ ಬರೋಡಾ 20 ನೇ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 02.11.2025 ರಂದು ಮಂಗಳೂರಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ವಲಯ ಕಛೇರಿಯ ಮಹಾಪ್ರಬಂಧಕರಾದ ಶ್ರೀ ರಾಜೇಶ್ ಖನ್ನಾರವರು ಹಾಗೂ ಉಪಾಧ್ಯಕ್ಷರಾಗಿ ವಲಯ ಕಚೇರಿಯ ಉಪಮಹಾಪ್ರಬಂಧಕರಾದ ಶ್ರೀ ರಮೇಶ್ ಕನ್ನಾಡೆ ರವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವಸಂತ್ ಕುಮಾರ್ ಪೆರ್ಲರವರು ಹಾಗೂ ಹರೇಕಳ ಹಾಜಬ್ಬರವರು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಕವಿ, ಸಾಹಿತಿ ವಿದ್ವಾಂಸರು, ಸಾಹಿತ್ಯ ಸಂಘಟಕರು ಹಾಗೂ ಮಂಗಳೂರು ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ. ವಸಂತ್ ಕುಮಾರ್ ಪೆರ್ಲರವರು ಕರ್ನಾಟಕದ ಇತಿಹಾಸವನ್ನು ಚೊಕ್ಕವಾಗಿ ಪ್ರಸ್ತಾಪಿಸಿದರು. ಅವರು ಆಂಗ್ಲ ಭಾಷೆಯನ್ನು ಹೋಲಿಸಿದರೆ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ಆದ್ದರಿಂದ ಕನ್ನಡವನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಎಲ್ಲರಿಗೂ ಮನವಿ ಮಾಡಿದರು.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶ್ರೀ ಹರೇಕಳ ಹಾಜಬ್ಬರವರು ಬೆಳೆದುಬಂದ ಮಾರ್ಗ, ಅವರು ಎದುರಿಸಿದ ಸವಾಲಿನ ಬಗ್ಗೆ ಸಭೆಯೊಂದಿಗೆ ಹಂಚಿಕೊಂಡರು. ಅವರು ತಮ್ಮ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಾಟದಿಂದ ಬಂದ ಹಣದ ಜೊತೆಗೆ ದಾನದ ಮೂಲಕ ಧನ ಸಂಗ್ರಹಿಸಿ ಸರಕಾರಿ ಶಾಲೆ ಕಟ್ಟಲು 1.22 ಎಕರೆ ಜಮೀನು ನೀಡಿದ್ದಾರೆ. ಅವರ ಈ ಸಾಧನೆಯನ್ನು ಕಂಡು ಕೇಂದ್ರ ಸರಕಾರ 2020ರ ಪದ್ಮಶ್ರೀ ನೀಡಿ ಗೌರವಿಸಿದೆ. ಈ ಸಾಧನೆಯ ಹಿಂದೆ ಹಲವು ರಾಷ್ಟ್ರೀಕೃತ ಬ್ಯಾಂಕ್ಗಳು ಸಹಾಯ ಮಾಡಿವೆ ಎಂದು ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಕರ್ನಾಟಕ ಹಾಗೂ ಕನ್ನಡದ ಮಹತ್ವದ ಬಗ್ಗೆ ಮಾತನಾಡಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ವಸಂತ್ ಕುಮಾರ್ ಪೆರ್ಲ ಹಾಗೂ ಹರೇಕಳ ಹಾಜಬ್ಬರವರಿಗೆ ಸನ್ಮಾನ ಮಾಡಿದರು.
ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಗಣಕಯಂತ್ರಗಳನ್ನು (ಕಂಪ್ಯೂಟರ್ ಗಳನ್ನು ) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹೈಸ್ಕೂಲ್, ಹರೇಕಳಕ್ಕೆ ಕಿರು ಕಾಣಿಕೆಯಾಗಿ ಹಾಜಬ್ಬರವರಿಗೆ ನೀಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.