



ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಾಲುದಾರರಾಗಿರುವ ರಾಜ್‍ಫಿಶ್‍ಮೀಲ್ ಮತ್ತು ಆಯಿಲ್ ಕಂಪೆನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್‍ಫಿಶ್‍ಮೀಲ್ ಸಾವನ್ನಪ್ಪಿದ ಮೀನು ಮತ್ತು ತ್ಯಾಜ್ಯವನ್ನು ನದಿಗೆ ಹರಿಬಿಟ್ಟು ನೀರು ಕಲುಷಿತಗೊಳಿಸುವುದರ ಜೊತೆಗೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. ಈ ಕಂಪೆನಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೋರಿ ಅರ್ಜಿದಾರ ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಅಮಿನ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ಅರ್ಜಿದಾರ ಪ್ರಶಾಂತ್ ಅಮಿನ್ ಅವರು ವೈಯಕ್ತಿಕ ಹಿತದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದೆ. ಅರ್ಜಿದಾರ ಪ್ರಶಾಂತ್ ಅಮಿನ್ ಅವರು ರಾಜ್ ಫಿಶ್‍ಮೀಲ್ ಮತ್ತು ಆಯಿಲ್ ಕಂಪೆನಿ ಜೊತೆ ವ್ಯವಹಾರ ಹೊಂದಿದ್ದು, ಕಂಪೆನಿಗೆ ಅರ್ಜಿದಾರರು ಮೀನು ಪೂರೈಕೆ ಮಾಡುತ್ತಿದ್ದರು. 2013-14 ಮತ್ತು 2020-21ರ ಅವಧಿಯಲ್ಲಿ ಕಂಪೆನಿಯು ಅರ್ಜಿದಾರರಿಗೆ 95 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಪಾವತಿ ಮಾಡಿದೆ.
ಕಂಪೆನಿ ಮತ್ತು ಅರ್ಜಿದಾರರ ನಡುವೆ ಒಪ್ಪಂದ ಮುರಿದು ಬಿದ್ದಾಗ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದು, ಇದರಲ್ಲಿ ಕಂಪೆನಿಯು ಸಾವನ್ನಪ್ಪಿದ ಮೀನು ಮತ್ತು ತ್ಯಾಜ್ಯವನ್ನು ನದಿಗೆ ಹರಿಯ ಬಿಟ್ಟು ನೀರು ಕಲುಷಿತಗೊಳಿಸುವುದರ ಜೊತೆಗೆ ಪರಿಸರಕ್ಕೆ ಹಾನಿ ಉಂಟು ಮಾಡಿದೆ ಎಂದು ದೂರಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಸರಣಾ ವರದಿ ಸಲ್ಲಿಸಿದ್ದು, ಕಂಪೆನಿಯ ಬಗ್ಗೆ ಯಾವುದೇ ಆಪಾದನೆ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿತು.
ಕಂಪೆನಿಯ ಜೊತೆ ವ್ಯವಹಾರ ಹೊಂದಿದ್ದರೂ ವಾಸ್ತವಿಕ ಅಂಶಗಳನ್ನು ಬಚ್ಚಿಟ್ಟು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಇದರಿಂದ ಇದು ಪಿಐಎಲ್ ಅಲ್ಲ, ಬದಲಿಗೆ ವೈಯಕ್ತಿಕ ಹಿತಾಸಕ್ತಿ ಅರ್ಜಿ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಅರ್ಜಿದಾರರು ನ್ಯಾಯಾಲಯದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ. ಹೀಗಾಗಿ, ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಉದ್ಯಮಿಯಾಗಿರುವ ಅರ್ಜಿದಾರ ಅಮಿನ್ ಅವರು ಒಂದು ತಿಂಗಳ ಒಳಗಾಗಿ 10 ಲಕ್ಷ ರೂಪಾಯಿ ದಂಡದ ಮೊತ್ತವನ್ನು ಪಾವತಿ ಮಾಡಬೇಕು. ಇಲ್ಲವಾದರೆ ಉಡುಪಿ ಜಿಲ್ಲಾಧಿಕಾರಿಯು ಅರ್ಜಿದಾರರಿಂದ ದಂಡ ವಸೂಲಿ ಮಾಡಿ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಜಮೆ ಮಾಡಬೇಕು. ಈ ಸಂಬಂಧ ಅನುಸರಣಾ ವರದಿಯನ್ನು ರಿಜಿಸ್ಟ್ರಾರ್ ಜನರಲ್‍ಗೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.