



ರಾಂ ಅಜೆಕಾರು ಕಾರ್ಕಳ ಉಡುಪಿ: ಭೂಮಿಯ ಮೇಲಿನ ಜೀವವೈವಿದ್ಯ ರಕ್ಷಣೆಗಾಗಿ ಅನೇಕ ಅಭಿಯಾನಗಳು ನಡೆಯುತ್ತಿದೆ. ಆದರೇ ಬೆಂಗಳೂರಿನ ಇಬ್ಬರು ಮಹಿಳೆಯರು ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆಗೆ ಪಣತೊಟ್ಟು ಕರಾವಳಿಯಾದ್ಯಂತ ಬೈಕುಗಳ ಮೇಲೆ ಸಂಚರಿಸುತಿದ್ದಾರೆ. ಅವರಲ್ಲಿ ಸ್ವಾತಿ ಆರ್. ಈ ಅಭಿಯಾನಕ್ಕಾಗಿಯೇ ದುರ್ಲಭ ಸರ್ಕಾರಿ ಉದ್ಯೋಗಕ್ಕೇ ರಾಜಿನಾಮೆ ನೀಡಿದ್ದಾರೆ, ಅನಿತ ಗೃಹಿಣಿ, ಪರಿಸರ ಜಾಗೃತಿಗಾಗಿ ಗೆಳತಿಯೊಂದಿಗೆ ಕೈಜೋಡಿಸಿದ್ದಾರೆ. ಈ ಗೆಳತಿಯರು ಈಗಾಗಲೇ ಫೆಬ್ರವರಿಯಲ್ಲಿ "ಮಹಿಳೆಯರ ಭಯಮುಕ್ತ ಕರ್ನಾಟಕ" ಎಂಬ ಅಭಿಯಾನವನ್ನು ನಡೆಸಿ, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಬೆಂಗಳೂರಿನಿಂದ 1300 ಕಿ.ಮೀ. ಬೈಕಿನಲ್ಲಿ ಬಂದು, ಆ.9ರಿಂದ ಮಂಗಳೂರಿನಿಂದ ಆರಂಭಿಸಿ ಕರಾವಳಿಯ 3 ಜಿಲ್ಲೆಗಳಲ್ಲಿ ಬೈಕ್ ಮೇಲೆ ಸಂಚರಿಸುತಿದ್ದಾರೆ. ಸಮುದ್ರ ಜೀವವೈವಿಧ್ಯಗಳ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಾವೇ ಬೀಚುಗಳಲ್ಲಿ ಕಸ ಹೆಚ್ಚಿ, ಸ್ವಚ್ಛತೆ ನಡೆಸಿ ಮಾದರಿಯಾಗುತ್ತಿದ್ದಾರೆ. ಮಂಗಳವಾರ ಇಲ್ಲಿನ ಹೂಡೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅವರೊಂದಿಗೆ ಸ್ಥಳೀಯರು, ಸಂಘಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದು, ಅವರು ಅಭಿಯಾನ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುವಂತಿತ್ತು. ಈಗಾಗಲೇ ಮಂಗಳೂರಿನ ಸೋಮೇಶ್ವರ, ಬೆಂಗ್ರೆ, ಪಣಂಬೂರು ಬೀಚುಗಳಲ್ಲಿ ಸಂಚರಿಸಿ ಅಲ್ಲಿನ ಜನರೊಂದಿಗೆ ವಿಚಾರವಿನಿಮಯ ನಡೆಸಿ ಸಮುದ್ರ ಜೀವಿಗಳ ರಕ್ಷಣೆಗೆ ಪರಿಸರವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಒಟ್ಟು 29 ಬೀಚುಗಳನ್ನು ಅಲ್ಲಿನ ಜನರನ್ನು ಸಂದರ್ಶಿಸುವ ಗುರಿ ಈ ಸ್ವಾತಿ - ಅನಿತಾ ಜೋಡಿಯದ್ದು.
ಜೀವವೈವಿಧ್ಯ ರಕ್ಷಣೆ ಹವ್ಯಾಸವಾಗಬೇಕು
ಸಮುದ್ರ ಜೀವಿಗಳ ರಕ್ಷಣೆಗೆ ಮುಖ್ಯವಾಗಿ ಪ್ಲಾಸ್ಟಿಕ್ ಸಮುದ್ರ ಸೇರದಂತೆ ಸ್ಥಳೀಯರಿಗೆ ಮತ್ತು ಬೀಚುಗಳಲ್ಲಿ ಸಿಗುವ ಪ್ರವಾಸಿಗರಿಗೆ ಮಾಹಿತಿ ನೀಡುತಿದ್ದೇವೆ. ಸ್ಥಳಿಯ ಕಾಲೇಜು ವಿದ್ಯಾರ್ಥಿಗಳ ಮತ್ತು ಪರಿಸರಾಸಕ್ತ ಮನಸ್ಸುಗಳನ್ನು ಒಂದೆಡೆ ಸೇರಿಸಿ ಬೀಚುಗಳನ್ನು ಕಸಮುಕ್ತ ಮಾಡುವ ಪ್ರಯತ್ನ ಮಾಡುತಿದ್ದೇವೆ. ಮುಂದೆ ಇದು ಎಲ್ಲರ ಹವ್ಯಾಸವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
-- ಸ್ವಾತಿ - ಅನಿತಾ ಬೆಗಂಳೂರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.