



ಮಕ್ಕಳ ಬಾಲಿಶ ವರ್ತನೆ ಹೇಳಲು ಪದಗಳೇ ಸಾಲದು. ಮಕ್ಕಳ ಮುಸಿಮುಸಿ ನಗು ಮಕ್ಕಳ ಅಂದವನ್ನು ಹೆಚ್ಚಿಸುತ್ತದೆ. ಕಾಮನಬಿಲ್ಲಿನಂತಹ ಚಿತ್ತಾರದ ಬದುಕು ಮಕ್ಕಳದ್ದು. ಮಕ್ಕಳ ಆಟವೇ ಚಂದ, ಮಗುವಿನ ನಗು ಎಲ್ಲರ ಮನಸ್ಸನ್ನು ಮುದಗೊಳಿಸುತ್ತದೆ. ಮಕ್ಕಳು ದೇವರಿಗೆ ಸಮಾನ . ಮಕ್ಕಳ ಆಟ ಪಾಠ ಎಲ್ಲಾ ದುಃಖಿತರ ದುಃಖವನ್ನು ಕಡಿಮೆ ಮಾಡುತ್ತದೆ . ಮಗು ಅತ್ತರೆ ಅಂದ ಇನ್ನೂ ನಕ್ಕರೆ ಅಂದವೋ ಅಂದ. ಮಗು ತನ್ನ ಪುಟ್ಟ ಪುಟ್ಟ ಕಾಲಿನಲ್ಲಿ ಅಂಬೆಗಾಲನಿಟ್ಟು ನಡೆಯುವ ಪರಿ ಕಾಣಲು ಎರಡು ಕಣ್ಣುಗಳು ಸಾಲದು. ಮಕ್ಕಳಿಗೆ ನೀರು ಅಂದರೆ ಪಂಚಪ್ರಾಣ, ಪೂರ್ತಿ ದಿನ ಬಿಟ್ಟರೆ ಮಕ್ಕಳು ನೀರಿನಲ್ಲಿ ಆಟ ಆಡುತ್ತಾರೆ. ಮಕ್ಕಳು ಕೇಳುವ ಕೌತುಕದ ಪ್ರಶ್ನೆಗಳು ಹಿರಿಯರಲ್ಲಿದಿಗ್ಭ್ರಾಂತಿ ಮೂಡಿಸುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ತಂದೆ-ತಾಯಿಯರ ಕರ್ತವ್ಯ ಈ ಕರ್ತವ್ಯವನ್ನು ಪೋಷಕರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು, ಆದರೆ ಎಲ್ಲಿ ಎಡವಿದ್ದೇವೆ ಎಂಬುದೇ ತಿಳಿಯದು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ, ಎಂಬ ಮಾತು ಎಷ್ಟು ಸತ್ಯವೋ ಅಂತೆಯೇ, ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು ತಾಯಿಯ ಅಪ್ಪುಗೆ ಎಲ್ಲದಕ್ಕಿಂತ ಶ್ರೇಷ್ಠ. ತಾಯಿ ಮಗುವನ್ನು ಲಾಲಿಸಿ ಪಾಲಿಸಿ ಮುದ್ದಿಸಿ, ಪ್ರೀತಿಯನ್ನು ನೀಡಿ, ಒಳ್ಳೆಯ ಸಂಸ್ಕಾರವನ್ನು ನೀಡಿ ದೇಶಕ್ಕೆ ಸಮರ್ಥ ಪ್ರಜೆಯನ್ನಾಗಿ ಮಾಡುತ್ತಾಳೆ. ತಾಯಿಯ ಮಮತೆಯ ಬಗ್ಗೆ ಹೇಳಲು ಪದಗಳೇ ಸಾಲದು, ಮಗು ಅತ್ತಾಗ ಮಗುವನ್ನು ಸಂತೈಸಿ ಕಥೆಗಳ ಮೂಲಕ ಮಕ್ಕಳನ್ನು ರಂಜಿಸುತ್ತಾರೆ. ತಾಯಿಯ ಎದೆ ಹಾಲು ಅಮೃತ ಕ್ಕಿಂತ ಮಿಗಿಲು, ತಾಯಿ ತನ್ನ ಎದೆಹಾಲಿನ ಮೂಲಕ ಮಗುವಿಗೆ ನೈತಿಕತೆಯನ್ನು ಕಲಿಸುತ್ತಾಳೆ. ಮಗುವಿನ ಸರ್ವತೋಮುಖ ಬೆಳವಣಿಗೆ ನಿಂತಿರುವುದೇ ತಾಯಿಯ ಮೇಲೆ ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಕಲೆ ತಾಯಿಯ ಮೇಲಿದೆ . ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ನರೇಂದ್ರ ನಾಗಿದ್ದ ಪುಟ್ಟ ಬಾಲಕ ಮುಂದೊಂದು ದಿನ ಜಗತ್ತೇ ಕೊಂಡಾಡುವ ಸ್ವಾಮಿ ವಿವೇಕಾನಂದ ಎಂದೇ ಪ್ರಸಿದ್ಧರಾದ ವ್ಯಕ್ತಿಯಾಗಿ ರೂಪಿಸುವಲ್ಲಿ ತಾಯಿ ಭುವನೇಶ್ವರಿಯ ಪಾತ್ರ ಮಹತ್ವದ್ದು. ತಂದೆ ವಿಶ್ವನಾಥ ದತ್ತ ಮಗ ನರೇಂದ್ರನನ್ನು ಪ್ರಶ್ನಿಸುತ್ತಾರೆ, ಮುಂದಿನ ಗುರಿ ಏನು ಎಂದು ಆಗ ನರೇಂದ್ರ ಆಗ ನಾನು ಸಾರಥಿ ಆಗುತ್ತೇನೆ ಎಂದು ತಿಳಿಸಿದನು. ಆಗ ತಂದೆ ಕೋಪಗೊಂಡು ನರೇಂದ್ರನ ಗದರಿಸುತ್ತಾರೆ , ಆಗ ತಾಯಿ ಭುವನೇಶ್ವರಿ ದೇವಿ ಶ್ರೀಕೃಷ್ಣನು ಸಾರಥಿಯಾಗಿ ಅರ್ಜುನನ ರಥವನ್ನು ಕುರುಕ್ಷೇತ್ರದಲ್ಲಿ ನಡೆಸುವ ಚಿತ್ರವನ್ನು ತೋರಿಸುತ್ತಾರೆ. ಇಂತಹ ಅದ್ಭುತವಾದ ಗುಣಗಳು ಸ್ವಾಮಿ ವಿವೇಕಾನಂದರಲ್ಲಿ ಬರಲು ತಾಯಿಯೇ ಕಾರಣ. ಛತ್ರಪತಿ ಶಿವಾಜಿ ಸಾಮ್ರಾಜ್ಯ ಕಟ್ಟಿ ರಾಜ್ಯವನ್ನು ಆಳುವಂತೆ ಮಾಡಿದ್ದು ತಾಯಿ ಜೀಜಾಬಾಯಿ ಎಂಬುದನ್ನು ಮರೆಯಬಾರದು. "ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಜನನಿಯಿಂದ ಪಾಠ ಕಲಿತ ನಾವೇ ಧನ್ಯರು".
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.