



ಬೆಂಗಳೂರು : ಪ್ರಾದೇಶಿಕ ಸಾರಿಗೆ ಕಚೇರಿಯ ವಾಹನ ನಿರೀಕ್ಷಕರ ಪರಿವೀಕ್ಷಣೆಗೆ ಕೊಂಡೊಯ್ಯದೇ, ಮೊದಲ ಬಾರಿಗೆ ಖರೀದಿಸಿದಂತ ಹೊಸ ವಾಹನಗಳನ್ನು ಆನ್ ಲೈನ್ ಮೂಲಕವೇ ನೊಂದಣಿಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ತಯಾರಿಕಾ ಹಂತದಲ್ಲಿಯೇ ರಸ್ತೆ ಬಳಕೆಗೆ ಯೋಗ್ಯವಾಗುವಂತೆ ಸಂಪೂರ್ಣ ನಿರ್ಮಿತವಾಗಿರುವ ಹಾಗೂ ಅಧಿಕೃತ ಮಾರಾಟಗಾರರಿಂದ ಮಾರಾಟಗೊಂಡ ಪ್ರಥಮ ಬಾರಿಗೆ ನೋಂದಣಿ ಮಾಡಿಸಿಕೊಳ್ಳುವಂತ ವಾಹನಗಳನ್ನು ಮೋಟಾರು ವಾಹನ ನಿರೀಕ್ಷಕರ ಪರಿವೀಕ್ಷಣೆಗಾಗಿ ಪ್ರಾದೇಶಿಕ ಸಾರಿಗೆ ಕಛೇರಿಗೆ ಕೊಂಡೊಯ್ದನಂತ್ರ ನೋಂದಣಿ ಮಾಡುವ ಪದ್ದತಿ ಈವರೆಗೆ ಜಾರಿಯಲ್ಲಿದೆ.
ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರು ಪಡಿಸುವ ಅವಶ್ಯಕತೆಯನ್ನು ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿತಂದು, ತೆಗೆದುಹಾಕಲಾಗಿದೆ. ಸದರಿ ತಿದ್ದುಪಡಿ ನಿಯಮದಂತೆ ಇನ್ಮುಂದೆ ಅಧಿಕೃತ ಮಾರಾಟಗಾರರಿಂದ ಖರೀದಿಸಿದ ಸಂಪೂರ್ಣವಾಗಿ ನಿರ್ಮಿತವಾಗಿರುವ ಮೋಟಾರುವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೇ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ಬರುವಂತೆ ತರಲಾಗಿದೆ. ಅಧಿಕೃತ ಮಾರಾಟಗಾರರಿಂದ ಮಾರಾಟಮಾಡಿದ ವಾಹನಗಳ ವಿವರಗಳನ್ನು ವಾಹನ-4 ಪೋರ್ಟಲ್ ನಲ್ಲಿ ಮಾರಾಟಗಾರರು ನಮೂದಿಸಿ, ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್ ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಆನ್ ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸುವುದು.
ಆನ್ ಲೈನ್ ನಲ್ಲಿ ಸ್ವೀಕರಿಸಿದಂತಹ ಅರ್ಜಿಗಳನ್ನು ಆನ್ ಲೈನ್ ನಲ್ಲಿಯೇ ಪರಿಶೀಲಿಸಿ, ನೋಂದಣಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳುತ್ತದೆ ಹಾಗೂ ನೋಂದಣಿ ಕ್ರಮಾಂಕವನ್ನು ನೀಡಲಾಗುತ್ತದೆ. ಈ ಬಗ್ಗೆ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.