



ಬೈಂದೂರು: ಫೇಸ್ ಬುಕ್ ಮೂಲಕ ಪರಿಚಯಗೊಂಡ ಸ್ನೇಹಿತನೊಬ್ಬ ಯಕ್ಷಗಾನ ಕಲಾವಿದನ ಮನೆಯ ಬೀಗ ಒಡೆದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿರೂರು ಗ್ರಾಮದ ಮೇಲ್ಪೇಟೆ ನಿವಾಸಿ 34ವರ್ಷದ ಸಂತೋಷ ಮೊಗವೀರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಯಕ್ಷಗಾನ ಕಲಾವಿದರಾಗಿದ್ದು, ಚಿಕ್ಕ ಮೇಳ ಎಂಬ ಯಕ್ಷಗಾನವನ್ನು ನಡೆಸಿಕೊಂಡಿದ್ದರು. ಇವರು ಮೇಳದ ಸಾಮಾಗ್ರಿಗಳೊಂದಿಗೆ ಶಿರೂರು ಗ್ರಾಮದ ಶಿರೂರು ಮೇಲ್ಪೆಟೆ ಎಂಬಲ್ಲಿ ಸುಭಾಷ್ ಪ್ರಭು ಅವರ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ಇವರಿಗೆ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ ಗುರುರಾಜ್ ಎಂಬವ ಪರಿಚಯವಾಗಿತ್ತು. ನ.9ರಂದು ಸಂತೋಷ್ ಅವರ ಕೊಠಡಿಗೆ ಬಂದು ಅವರೊಂದಿಗೆ ಉಳಿದುಕೊಂಡಿದ್ದನು. ನ. 12ರಂದು ಸಂತೋಷ್ ಅವರು ಚಿಕ್ಕ ಮೇಳ ಕಾರ್ಯಕ್ರಮದ ಪ್ರಯುಕ್ತ ಕುಂದಾಪುರ ತಾಲೂಕಿನ ಹೆರಿಕುದ್ರು ಎಂಬಲ್ಲಿಗೆ ಹೊರಟಿದ್ದರು. ಅವರೊಂದಿಗೆ ಗುರುರಾಜ್ ಕೂಡ ಹೋಗಿದ್ದನು. ಈ ವೇಳೆ ಗುರುರಾಜ್ ಕಾರ್ಯಕ್ರಮ ವಿಡಿಯೋ ಮಾಡುವ ಉದ್ದೇಶದಿಂದ ಸಂತೋಷ್ ಅವರ ಮೊಬೈಲ್ ಪಡೆದಿದ್ದನು. ಬಳಿಕ ಅವರಿಗೆ ತಿಳಿಸದೇ ಶಿರೂರು ಮೇಲ್ಪೆಟೆಗೆ ಬಂದು ಸಂತೋಷ್ ವಾಸ್ಥವ್ಯವಿರುವ ಕೊಠಡಿಯ ಬೀಗವನ್ನು ಒಡೆದು ಬ್ಯಾಗ್ ನಲ್ಲಿಟ್ಟಿದ್ದ 12 ಗ್ರಾಂ ತೂಕದ ಚಿನ್ನದ ಕೊರಳಿನ ಚೈನ್, 4 ಗ್ರಾಂ ತೂಕದ ಚಿನ್ನದ ಉಂಗುರ, ಕಾಣಿಕೆ ಡಬ್ಬಿಯಲ್ಲಿದ್ದ 10 ಸಾವಿರ ನಗದು, ಇನ್ನೊಂದು ಡಬ್ಬಿಯಲ್ಲಿದ್ದ 1 ಸಾವಿರ ರೂ. ನಗದು ಹಾಗೂ 14 ಸಾವಿರ ಮೌಲ್ಯದ Realme ಮೊಬೈಲ್ ಫೋನ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 85 ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.