

ಬೆಂಗಳೂರು: ರೋಗಿಯ ಮೃತದೇಹವನ್ನು ಹಸ್ತಾಂತರಿಸಲು ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಕುಟುಂಬಸ್ಥರನ್ನು ಸತಾಯಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮೃತದೇಹ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರೂಪಿಸುವ ಚಿಂತನೆ ನಡೆಸಲಾಗುತ್ತಿದ್ದು, ಈ ಮೂಲಕ ಹಣಕ್ಕಾಗಿ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವ ಪದ್ಧತಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಯೊಬ್ಬರು ಮೃತಪಟ್ಟ ಬಳಿಕ ಬಿಲ್ ಪಾವತಿಸದಿದ್ದರೆ ಮೃತದೇಹ ಹಸ್ತಾಂತರಿಸಲು ನಿರಾಕರಿಸುವ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಈಗಾಗಲೇ ದುಃಖದಲ್ಲಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೂ ಸಿಲುಕುತ್ತಿವೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಮೃತದೇಹ ಹಸ್ತಾಂತರಕ್ಕೆ ಬಿಲ್ ಪಾವತಿಯನ್ನು ಷರತ್ತಾಗಿ ವಿಧಿಸದಂತೆ ನಿಯಮ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಮೃತದೇಹವನ್ನು ಪಡೆಯಲು ಹಣ ಪಾವತಿಸುವಂತೆ ಕುಟುಂಬಸ್ಥರನ್ನು ಒತ್ತಾಯಿಸುವುದು ಸರಿಯಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳು ಹಣ ಹೊಂದಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ಹೊಸ ನೀತಿ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
2007 ಮತ್ತು 2018ರಲ್ಲಿ ಈ ಸಂಬಂಧ ಕಾನೂನುಗಳು ಜಾರಿಯಾಗಿದ್ದರೂ, ಅವುಗಳ ಸಮರ್ಪಕ ಅನುಷ್ಠಾನವಾಗಿಲ್ಲ ಎಂದು ಸಚಿವರು ಹೇಳಿದರು. 2007ರ ಕಾನೂನಿನ ಪ್ರಕಾರ ಆಸ್ಪತ್ರೆಗಳು ಮೃತದೇಹವನ್ನು ಬಾಕಿ ಹಣಕ್ಕಾಗಿ ತಡೆಹಿಡಿಯುವಂತಿಲ್ಲ. ಆದರೆ, 2018ರ ಕಾನೂನಿನಲ್ಲಿ ಶ್ಯೂರಿಟಿ ಪಡೆದು ಮೃತದೇಹ ಹಸ್ತಾಂತರಿಸಲು ಅವಕಾಶವಿದ್ದು, ನಂತರ ಬಾಕಿ ಹಣ ಪಾವತಿಸದಿದ್ದರೆ ಪ್ರಕರಣ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯಿಂದ ಕಾನೂನು ಕ್ರಮದ ಭಯದಲ್ಲಿರುವ ಕುಟುಂಬಗಳು ಸಾಲ ಮಾಡಿಯಾದರೂ ಹಣ ಪಾವತಿಸುವ ಪರಿಸ್ಥಿತಿ ಎದುರಿಸುತ್ತಿವೆ ಎಂದು ಅವರು ವಿವರಿಸಿದರು.
ಮೃತದೇಹ ಹಸ್ತಾಂತರಿಸಲು ಆಸ್ಪತ್ರೆಗಳು ನಿರಾಕರಿಸಿದರೆ ರೋಗಿಯ ಸಂಬಂಧಿಕರು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ನಿಯಮಗಳ ಅಗತ್ಯವಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮಧ್ಯಪ್ರವೇಶಿಸಿದರೂ ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಗಳು ಸೂಚನೆ ಪಾಲಿಸುತ್ತಿಲ್ಲ. ಹೀಗಾಗಿ, ಪ್ರಸ್ತುತ ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಖಾದರ್ ತಿಳಿಸಿದರು.
ಈ ಸಂಬಂಧ ಖಾಸಗಿ ಆಸ್ಪತ್ರೆಗಳ ಸಂಘಟನೆಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮೃತದೇಹ ಹಸ್ತಾಂತರದ ವಿಚಾರದಲ್ಲಿ ಕುಟುಂಬಸ್ಥರಿಗೆ ಅನಗತ್ಯ ತೊಂದರೆಯಾಗದಂತೆ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.