



ಉಡುಪಿ : ಕಡಲ ತೀರದ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಸೂಚನೆ ನೀಡಿದರು. ಅವರು ಶುಕ್ರವಾರ ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಮುದ್ರ ತೀರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯ 92 ಕಿಲೋಮೀಟರ್ ಕಡಲ ತೀರದಲ್ಲಿ ಅನೇಕ ಬೀಚ್‌ಗಳಿದ್ದು, ಇವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನೀಲಿ ನಕಾಶೆಯನ್ನು ತಯಾರಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ಬೀಚ್‌ಗಳಲ್ಲಿಯೂ ಸಹ ಸರ್ವೆ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಸಮುದ್ರದ ತೀರದ ಜಾಗಗಳನ್ನು ಗುರುತಿಸುವ ಕಾರ್ಯಗಳನ್ನು ಕೈಗೊಳ್ಳಬೇಕು. ಇದರಿಂದಾಗಿ ಅತಿಕ್ರಮಣ ಆಗುವುದನ್ನು ತಪ್ಪಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು. ಸಿ.ಆರ್.ಝೆಡ್ ನಿಯಮಗಳಲ್ಲಿ ಅನೇಕ ಬದಲಾವಣೆಗಳು ಆಗಿದ್ದು ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಬಾಗಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅನೇಕ ಆಸಕ್ತರು ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಮುಂದಿದ್ದಾರೆ. ಅವರುಗಳಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಬೆಳಕು ಚೆಲ್ಲುವ ವಿಡಿಯೋ ತುಣುಕುಗಳನ್ನು ಬೆಂಗಳೂರು ಹಾಗೂ ಮಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗುವುದರ ಜೊತೆಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಫಲಕಗಳನ್ನು ಸಹ ಅಳವಡಿಸಬೇಕು ಎಂದರು.
ಮಲ್ಪೆ ಬೀಚ್, ಅಸರೆ ಬೀಚ್, ಕೋಡಿ, ಕುಂದಾಪುರ ಬೀಚ್ ಗಳಲ್ಲಿ ವಿನೂತನ ಮಾದರಿಯ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಿಸಲು ಅನುಮತಿ ನೀಡುವಂತೆ ಬೆಂಗಳೂರಿನ ಕೆಲವು ಚಾರಿಟೇಬಲ್ ಟ್ರಸ್ಟ್ ಗಳು ಮುಂದೆ ಬಂದಿವೆ. ಅವುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಜಿಲ್ಲೆಯ ಮಲ್ಪೆ ಬೀಚಿನಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು ಹೆಚ್ಚಿನ ಆದಾಯ ಬರುತ್ತಿದೆ. ಸರ್ಕಾರದಿಂದ ಜಿಲ್ಲೆಗೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನದ ಕೊರತೆಯಿದ್ದು, ಅಲ್ಲಿನ ವಾರ್ಷಿಕ ಆದಾಯದ ಶೇಕಡ 50 ರಷ್ಟು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಿತಿಗೆ ನೀಡಲು ತೀರ್ಮಾನಿಸಲಾಗುವುದು ಎಂದರು. ಬೈAದೂರು ತಾಲೂಕಿನ ಪಡವರಿ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಖಾಸಗಿ ಜಮೀನನ್ನು ಖಾಸಗಿ ಅವರಿಂದ ಕರೆಯಿಸಿ ಖರೀದಿಸಲು ಅವರೊಂದಿಗೆ ಮಾತುಕತೆ ನಡೆಸಿ ಖರೀದಿಗೆ ಮುಂದಾಗ ಬೇಕೆಂದು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು. ಬ್ಲೂ ಫ್ಲಾಕ್ ಬೀಚಿನಲ್ಲಿ ಪ್ರವಾಸರಿಗೆ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕೈಗೊಂಡಿರುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು ,ನೀರಿನ ಸೌಲಭ್ಯಗಳ ಕೊರತೆಯಿದ್ದಲ್ಲಿ ಸ್ಥಳೀಯ ಪಂಚಾಯಿತಿ ಜಾಗದಲ್ಲಿ ಬೋರ್ ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್., ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ನಗರಸಭೆ ಆಯುಕ್ತ ರಾಯಪ್ಪ, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂನ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ, ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷ ನಾಗರಾಜ್ ಹೆಬ್ಬಾರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.