



ವಿದ್ಯಾಗಿರಿ: ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ. ಹಂ.ಪ.ನಾಗರಾಜಯ್ಯ (ಹಂಪನಾ)ಅವರ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗರೂಪಕ್ಕೆ ತರುತ್ತಿದ್ದು, ಅ.೨೯ ರಂದು ಸಂಜೆ ೬.೧೫ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಮೊದಲ ಪ್ರದರ್ಶನ ಕಾಣಲಿದೆ.
ಹಂಪನಾ ರಚಿಸಿದ ದೇಸೀ ಕಾವ್ಯವನ್ನು ರಂಗಕರ್ಮಿ, ಸಾಹಿತಿ ಡಾ.ನಾ.ದಾ.ಶೆಟ್ಟಿ ರಂಗರೂಪಕ್ಕಿಸಿದ್ದಾರೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಬಳಿಕ ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ.
ಚಾರುವಸಂತ ಈಗಾಗಲೇ ೧೬ ಭಾಷೆಗಳಿಗೆ ಅನುವಾದಗೊಂಡ ಹಂಪನಾ ಅವರ ಪ್ರಸಿದ್ಧ ಮಹಾಕಾವ್ಯ. ದೇಶದ ಪ್ರಾಚೀನ ಕಥಾ ಪರಂಪರೆಯಲ್ಲಿ ಚಾರುದತ್ತನ ಕಥೆಗೆ ವಿಶಿಷ್ಟ ಸ್ಥಾನವಿದೆ. ಈ ಕಥೆಯನ್ನು ಪ್ರೇರಣೆಯಾಗಿಟ್ಟುಕೊಂಡು ಶೃಂಗಾರ ಮತ್ತು ಸಾಹಸ ಪ್ರಧಾನವಾದ ಈ ಕಥೆಯ ಮೂಲಕ ವರ್ತಮಾನದ ಸವಾಲು ಹಾಗೂ ತಲ್ಲಣಗಳಿಗೆ ಉತ್ತರಿಸುವ ಪ್ರಯತ್ನವನ್ನು ಹಂಪನಾ ಮಾಡಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಪ್ರಯೋಗವನ್ನು ಬಹಳ ಭಿನ್ನವಾಗಿ ಜೀವನ್ ರಾಂ ಸುಳ್ಯ ರಂಗರೂಪಕ್ಕೆ ಇಳಿಸಿದ್ದಾರೆ.
ಹಂಪನಾ ರಿಂದಲೇ ಚಾಲನೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ, ಡಾ. ಹಂ.ಪ.ನಾಗರಾಜಯ್ಯ ಅವರು ಚಾರುವಸಂತ ರಂಗಪಯಣವನ್ನು ಉದ್ಘಾಟಿಸುವರು.
ಚಾರುವಸಂತ ಕಾವ್ಯವನ್ನು ನಾಟಕವನ್ನಾಗಿಸಿದ ಡಾ.ನಾ.ದಾಮೋದರ ಶೆಟ್ಟಿ, ಆಳ್ವಾಸ್ ಕಾಲೇಜು ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಆಳ್ವಾಸ್ ಪ.ಪೂ.ಕಾಲೇಜು ಪ್ರಾಂಶುಪಾಲರಾದ ಪ್ರೊ| ಮಹಮ್ಮದ್ ಸದಾಕತ್ ಉಪಸ್ಥಿತರಿರುವರು. ಪ್ರವೇಶ ಉಚಿತವಾಗಿದೆ.
ಚಾರುವಸಂತ ರಂಗಪಯಣ: ‘ಚಾರುವಸಂತ’ ಅ.೩೧ ರಂದು ಕಲಾಮಂದಿರ ಮೈಸೂರು, ನ.೦೨ ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ನ.೦೪ ಡಾ.ಎಚ್.ಎನ್.ಕಲಾಮಂದಿರ ಗೌರಿಬಿದನೂರು, ನ.೦೬ ಗುಬ್ಬಿ ವೀರಣ್ಣ ಕಲಾಮಂದಿರ ತುಮಕೂರು, ನ.೦೮ ರಂದು ತ.ರಾ.ಸು.ರಂಗಮAದಿರ ಚಿತ್ರದುರ್ಗ, ನ.೧೦ ರಂದು ಮಲ್ಲಿಕಾರ್ಜುನ ರಂಗಮAದಿರ ದಾವಣಗೆರೆ, ನ.೧೨ ಡಾ.ಪಾಟೀಲ ಪುಟ್ಟಪ್ಪ ಸಭಾಭವನ ಧಾರವಾಡ ಹಾಗೂ ನ.೧೫ ರಂದು ರಂಗಮನೆ ಸುಳ್ಯದಲ್ಲಿ ಪ್ರದರ್ಶನಗೊಳ್ಳಲಿದೆ.
ಹಿಂದಿಯಲ್ಲೂ ಚಾರುವಸಂತ: ಚಾರುವಸಂತವನ್ನು ಹಿಂದಿ ಭಾಷೆಯಲ್ಲೂ ಸಿದ್ಧ ಪಡಿಸಿಕೊಂಡು ದೇಶದ ಪ್ರಮುಖ ನಗರಗಳಲ್ಲಿ ಪ್ರದರ್ಶಿಸುವ ಯೋಜನೆಯೂ ಇದೆ ಎಂದು ನಿರ್ದೇಶಕರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.