



ಮಂಗಳೂರು: ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ ನಗರದ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ.
ನಟಿ ಪದ್ಮಜಾ ರಾವ್ ಅವರು ಜೂನ್ 17, 2020 ರಂದು 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ನೀಡಿದ್ದರು. ಈ ಚೆಕ್ ಅನ್ನು ನಗದೀಕರಿಸಲು ಹಾಕಿದಾಗ, ಪದ್ಮಜಾ ರಾವ್ ಅವರ ಖಾತೆಯಲ್ಲಿ ಅಷ್ಟೊಂದು ಮೊತ್ತ ಇರಲಿಲ್ಲ. 15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ 2020ರ ಜೂನ್ 30ರಂದು ಪದ್ಮಜಾ ರಾವ್ ಅವರಿಗೆ ನೋಟಿಸ್ ನೀಡಿದರೂ ಅವರು ಹಣ ಪಾವತಿಸಿರಲಿಲ್ಲ ಎಂದು ವೀರೂ ಟಾಕೀಸ್ ಸಂಸ್ಥೆಯ ಮಾಲೀಕ, ಮಂಗಳೂರು ಮೇರಿಹಿಲ್ ನಿವಾಸಿ ವೀರೇಂದ್ರ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸಮನ್ಸ್ ಜಾರಿಯಾದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ಪದ್ಮಜಾ ರಾವ್ ಅವರು ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ. ಅವರಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು.
52.70 ಲಕ್ಷ ವಂಚನೆ ಮಾಡಿದ ಬಗ್ಗೆ ವೀರೇಂದ್ರ ಶೆಟ್ಟಿ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀ ಸ್ ಠಾಣೆಯಲ್ಲಿ 2020ಮಾರ್ಚ್ 23ರಂದು ದೂರು ದಾಖಲಿಸಿದ್ದಕ್ಕೆ ಪ್ರತಿಯಾಗಿ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ. ಅವರ ಮನೆಯಿಂದ ಚೆಕ್ ಕಳವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ಪದ್ಮಜಾರಾವ್ ಪರ ವಕೀಲರು ವಾದಿಸಿದ್ದರು. ಆದರೆ, ಇದಕ್ಕೆ ಪೂರಕ ಪುರಾವೆಗಳನ್ನು ಒದಗಿಸುವಲ್ಲಿ ಅವರು ವಿಫಲರಾಗಿದ್ದರು.
8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ ಪದ್ಮಜಾ ರಾವ್ ಅವರು 40.20 ಲಕ್ಷ ರೂ. ದಂಡ ಪಾವತಿಸಬೇಕು. ಅದರಲ್ಲಿ 40.17 ಲಕ್ಷವನ್ನು ದೂರುದಾರರಿಗೆ ನೀಡಬೇಕು ಹಾಗೂ 3 ಸಾವಿರವನ್ನು ನ್ಯಾಯಾಲಯಕ್ಕೆ ಪಾವತಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.