



ಕಡಿಮೆ ಬಜೆಟ್, ಹೊಸ ತಂಡ ಮತ್ತು ದೊಡ್ಡ ಕನಸಿನೊಂದಿಗೆ ರೂಪುಗೊಂಡಿರುವ ಕ್ರೌಡ್ ಫಂಡೆಡ್ ಚಲನಚಿತ್ರ “ದಕ್ಕೆ”ಈತನ ಇದೀಗ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. 13 ವಂಡರ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಡಾ. ನಿರಂಜನ್ ಸಮಾನಿ, ನವ್ಯಾ ಎಸ್.ಕೆ ಹಾಗೂ ರಾಹುಲ್ ದೇವಾಡಿಗ ಅವರು ಕ್ರೌಡ್ ಫಂಡಿಂಗ್ ಮೂಲಕ ನಿರ್ಮಿಸಿದ್ದಾರೆ.
ಪ್ರಶಸ್ತಿ ವಿಜೇತ ಕಿರುಚಿತ್ರಗಳಾದ “ಅಮ್ಮಿ” ಮತ್ತು “ಕಟ್ಟಿದ್ದು ಕಾಣದಹಾಗೆ” ಮೂಲಕ ಗಮನಸೆಳೆದಿರುವ ಸಾತ್ವಿಕ್ ಶಂಕರ್ ಶೆಟ್ಟಿ ಅವರು “ದಕ್ಕೆ” ಚಿತ್ರದ ನಿರ್ದೇಶಕರಾಗಿದ್ದು, ಕಥೆಯನ್ನೂ ಅವರೇ ರಚಿಸಿದ್ದಾರೆ. ಶಿವರಾಜ್ ಪುತ್ರನ್ ಅವರು ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಡಾ. ನಿರಂಜನ್ ಸಮಾನಿ, ಉದಯ್ ಬಾಬ್ಬಾ, ರೂಪಾ ಡಿ ಶೆಟ್ಟಿ, ನವೀಶ್ ಶೆಟ್ಟಿ, ಸಾತ್ವಿಕ್ ಶಂಕರ್ ಶೆಟ್ಟಿ, ಚಿಂತನ್, ರಾಹುಲ್ ದೇವಾಡಿಗ, ಅರುಣ್ ಸದಾಶಿವ ದೇವಾಡಿಗ, ಅಭಿಲಾಷ್ ಭವಿಷ್ ಕೆ.ಎಸ್, ದೀಕ್ಷಿತ್ ಕೆ ಅಂಡಿಂಜೆ, ವಿಖ್ಯಾತ್ ಶೆಟ್ಟಿ ಮತ್ತು ಸಾದ್ವಿ ಪಿ. ಶೆಟ್ಟಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಡಾಕ್ಟರ್ ವೃತ್ತಿಯಿಂದ ನಟನಾಗಿ ಚಿತ್ರರಂಗ ಪ್ರವೇಶಿಸಿರುವ ಡಾ. ನಿರಂಜನ್ ಸಮಾನಿ ಅವರ ಮೊದಲ ಚಲನಚಿತ್ರ ಇದಾಗಿದೆ. ತುಳು ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ, ವಿಶೇಷವಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಶ್ರೀಮುರಳಿ ನಾಯಕನಾಗಿರುವ ‘ಬಘೀರಾ’ ಸಿನಿಮಾದಲ್ಲಿ ನಟಿಸಿರುವ ರೂಪಾ ಡಿ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿರುವ ಚಿಂತನ್, ಮತ್ತು ‘ದಸ್ಕತ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ದೀಕ್ಷಿತ್ ಕೆ ಅಂಡಿಂಜೆ ಈ ಚಿತ್ರದಲ್ಲಿದ್ದಾರೆ.
ಕೇರಳ ಮೂಲದ ಅಗ್ನಿವೇಶ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸಾಹಿತ್ಯವನ್ನು ಚಿನ್ಮಯ್ ಪೈ ರಚಿಸಿದ್ದಾರೆ. ಛಾಯಾಗ್ರಹಣವನ್ನು ಅಬ್ದುಲ್ ಬಾಸಿತ್, ಆದಿತ್ಯ ರತ್ನಾಕರ್ ಮತ್ತು ಸಾಗರ್ ನಿರ್ವಹಿಸಿದ್ದಾರೆ. ಸಂಪಾದನೆಯನ್ನು ಸಾತ್ವಿಕ್ ಶಂಕರ್ ಶೆಟ್ಟಿ ಹಾಗೂ ಅಬ್ದುಲ್ ಹಮೀಮ್ ಎ ಮಾಡಿದ್ದು, ಧನುಷ್ ಶೆಟ್ಟಿ ಸಹ ಸಂಪಾದಕರಾಗಿದ್ದಾರೆ.
ಕೇವಲ 12 ಜನರ ತಂಡದೊಂದಿಗೆ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾದ “ದಕ್ಕೆ” ಚಿತ್ರವು ಎಲ್ಲರಿಗೂ ಚೊಚ್ಚಲ ಅನುಭವವಾಗಿದೆ. ಐಟಿ ವೃತ್ತಿಪರರಿಂದ ನಿರ್ಮಿಸಲಾದ ಈ ಚಿತ್ರ, ಕಿರುಚಿತ್ರದಿಂದ ಆರಂಭಗೊಂಡ ಪಯಣವನ್ನು ಚಲನಚಿತ್ರವಾಗಿ ಬೆಳೆಸಿ ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಮೊದಲ ಬಾರಿಯ ನಿರ್ಮಾಪಕರು, ನಿರ್ದೇಶಕರು, ನಟ–ನಟಿಯರು ಹಾಗೂ ತಾಂತ್ರಿಕ ತಂಡದ ಪರಿಶ್ರಮದ ಫಲವಾಗಿ ಮೂಡಿಬಂದಿರುವ “ದಕ್ಕೆ”, ಹೊಸಬರ ಕನಸು ಮತ್ತು ಆತ್ಮವಿಶ್ವಾಸದ ಪ್ರತೀಕವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.