



ಉಡುಪಿ: ಕೇಂದ್ರ ಹವಾಮಾನ ಇಲಾಖೆ ಪ್ರಸಕ್ತ ಸಾಲಿನ ಬಿಸಿಗಾಳಿ ಕುರಿತು ಮುನ್ಸೂಚನೆ ನೀಡಿದ್ದು, ಪ್ರಸ್ತುತ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಸೆ. ಅಧಿಕ ತಾಪಮಾನ ದಾಖಲಾಗುತ್ತಿದೆ. ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಬಿಸಿಗಾಳಿಯ ಅಪಾಯಗಳನ್ನು ತಡೆಯಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮಧ್ಯಾಹ್ನ 12ರಿಂದ 3ರ ವರೆಗಿನ ಗರಿಷ್ಠ ಬಿಸಿಲಿನ ಓಡಾಟ ಕಡಿಮೆ ಮಾಡಬೇಕು, ಬಾಯಾರಿಕೆ ಇಲ್ಲದಿದ್ದರೂ ನೀರನ್ನು ಸೇವಿಸಬೇಕು. ಹಗುರ, ತಿಳಿ ಬಣ್ಣದ ಸಡಿಲ, ಹತ್ತಿ ಬಟ್ಟೆಗಳನ್ನು ಧರಿಸಬೇಕು. ಕನ್ನಡಕ, ಛತ್ರಿ/ ಟೊಪಿ, ಬೂಟು, ಚಪ್ಪಲಿ ಬಳಕೆ ಮಾಡಬೇಕು.
– ಉಷ್ಣತೆ ಅಧಿಕ ಇರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. – ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟ್ ಪಾನೀಯ ಸೇವಿಸಬಾರದು. ಬಿಸಿ ಆಹಾರ ಸೇವಿಸಬಾರದು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ಬಿಡಬಾರದು. ಇದರಿಂದ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು ಸನ್‌ಸ್ಟ್ರೋಕ್ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಅಸ್ವಸ್ಥರಾದರೆ … ಬಿಸಿಗಾಳಿಗೆ ತುತ್ತಾಗಿ ಯಾರಾದರೂ ಅಸ್ವಸ್ಥರಾದರೆ ಅವರನ್ನು ನೆರಳಿಗೆ ಸ್ಥಳಾಂತರಿಸಿ ನೀರು, ತಂಪು ಗಾಳಿಯ ವ್ಯವಸ್ಥೆ ಮಾಡಬೇಕು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಮದ್ಯಪಾನ, ಕಾಫಿ ಹಾಗೂ ಶೇಖರಿಸಿದ ಪಾನೀಯ ನೀಡಬಾರದು. ಬಿಸಿಗಾಳಿಗೆ ತುತ್ತಾದವರ ಮೇಲೆ ತಂಪಾದ ಒದ್ದೆ ಬಟ್ಟೆಯನ್ನು ಹಾಕುವ ಮೂಲಕ ವ್ಯಕ್ತಿಯನ್ನು ತಂಪಾಗಿರಿಸಬೇಕು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸಬೇಕು ಎಂದು ಪ್ರಕಟನೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.