


ಬೆಂಗಳೂರು:** ನಟ ಪುನೀತ್ ರಾಜ್‌ಕುಮಾರ್ ನಿಧನದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ರಿತ್ವಿಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಸಾಮಾಜಿಕ ಮಾಧ್ಯಮ ಬಳಸಲು ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಇಂತಹ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸಬಹುದೇ ಎಂದು ಪ್ರಶ್ನಿಸಿತು.
ಪುನೀತ್ ರಾಜ್‌ಕುಮಾರ್ ಅವರು ಹಿರಿಯ ನಟ ಡಾ. ರಾಜ್‌ಕುಮಾರ್ ಅವರ ಪುತ್ರರಾಗಿದ್ದು, ಅವರ ನಿಧನದ ಸಂದರ್ಭದಲ್ಲಿ ಇಂತಹ ಪದಗಳನ್ನು ಬಳಸುವುದು ಸೂಕ್ತವೇ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದಿಸಿ, ರಿತ್ವಿಕ್ ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. ಪೋಸ್ಟ್‌ನ ಗಂಭೀರ ಪರಿಣಾಮಗಳ ಅರಿವು ಅವರಿಗೆ ಇರಲಿಲ್ಲ. ಪೋಸ್ಟ್ ಅನ್ನು ಅವರ ಸ್ನೇಹಿತ ಮಾಡಿದ್ದಾನೆ. ರಿತ್ವಿಕ್ ಈಗಾಗಲೇ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ರಿತ್ವಿಕ್‌ಗೆ ಕ್ರಿಮಿನಲ್ ಪ್ರಕರಣದಿಂದ ಶೈಕ್ಷಣಿಕ ಹಾಗೂ ವೃತ್ತಿ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ವಕೀಲೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ರಿತ್ವಿಕ್ ಅವರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ, ಅವರ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಪರಿಗಣಿಸಿ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
ಪುನೀತ್ ರಾಜ್‌ಕುಮಾರ್ ನಿಧನರಾದ ಕೆಲವೇ ದಿನಗಳಲ್ಲಿ, 2021ರ ನವೆಂಬರ್ 1ರಂದು ಕಿಂಗ್‌ಫಿಷರ್ ಬಿಯರ್ ಬಾಟಲಿಯ ಫೋಟೊದೊಂದಿಗೆ ಆಕ್ಷೇಪಾರ್ಹ ಸಾಲನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67 ಹಾಗೂ ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.