



ಕಾರ್ಕಳ : ಭಾರತೀಯ ಗೋತಳಿಗಳ ಬಗೆಗೆ ಸಮಗ್ರ ಅಧ್ಯಯನ ನಡೆಸಿ ನೈಜೀರಿಯಾ, ಬೆನಿನ್, ಐವೆರಿಕೊಸ್ಟ, ಇತಿಯೋಪಿಯ ಸಹಿತ ವಿಶ್ವದ ಇತರ ದೇಶಗಳಲ್ಲಿ ಗೋತಳಿಯನ್ನು ಅಭಿವೃದ್ಧಿ ಪಡಿಸಿ ಗೋಧಾಮಗಳನ್ನು ಸ್ಥಾಪಿಸುವ ಉದ್ದೇಶದಿಂದ ಕರ್ನಾಟಕದ ಮುನಿಯಾಲಿನಲ್ಲಿ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ - ಗೋಧಾಮಕ್ಕೆ ಭೇಟಿ ನೀಡಿದ್ದೇನೆ. ಪ್ರಕೃತಿ ರಮಣೀಯ ತಾಣದಲ್ಲಿ ಗೋಧಾಮವನ್ನು ಅತ್ಯುತ್ತಮವಾಗಿ ಸ್ಥಾಪಿಸಲಾಗಿದೆ. ಭಾರತೀಯ ಗೋತಳಿಯ ಅಭಿವೃದ್ದಿಯ ಜೊತೆಗೆ ಗೋತಳಿಗಳ ಸಂರಕ್ಷಣೆ ಅತ್ಯಂತ ಪುಣ್ಯ ಮತ್ತು ಮಹತ್ವದ ಕಾರ್ಯ ಎಂದು ದುಬೈ ಮೂಲದ ಸ್ಟೋಲಿಯನ್ ಗ್ರೂಫ್ ರೈಸ್ ಡಿವಿಜನ್ ಅಫ್ರಿಕನ್ ಹೆಡ್ ಅಮಿತ್ ರಾಯ್ ಹೇಳಿದರು. ಅವರು ಗುರುವಾರ ಹೆಬ್ರಿ ತಾಲ್ಲೂಕಿನ ಮುನಿಯಾಲಿನಲ್ಲಿರುವ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ - ಗೋಧಾಮಕ್ಕೆ ಭೇಟಿ ನೀಡಿ ದೇಶಿಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳ ಅಧ್ಯಯನ ನಡೆಸಿ ಬಳಿಕ ಗೋಪೂಜೆ ಸಲ್ಲಿಸಿ ಮಾತನಾಡಿದರು. ವಿಶಾಲವಾದ ಗೋಧಾಮದಲ್ಲಿ ಭಾರತೀಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳು, ಗೋವು ಆಧಾರಿತ ಕೃಷಿ ಪದ್ಧತಿ,ಸಾವಯವ ಕೃಷಿ ಪದ್ಧತಿಯ ಸಹಿತ ಸಮಗ್ರ ಅಧ್ಯಯನ ನಡೆಸಿದರು. ಮುನಿಯಾಲು ಗೋಧಾಮದಲ್ಲಿ ಅದ್ಬುತ ಅನುಭವವಾಗಿದೆ ಎಂದು ಅಮಿತ್ ರಾಯ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಮಿತ್ ರಾಯ್ ದಂಪತಿಗಳು ಗೋಧಾಮದಲ್ಲಿ ಗೋಪಾಲಕೃಷ್ಣ ದೇವರು ಮತ್ತು ಗೋವಿನ ಪೂಜೆ ನೆರವೇರಿಸಿದರು. ಔಷಧೀಯ ಸಸ್ಯಗಳು ಮತ್ತು ದೇವರಿಗೆ ಪ್ರಿಯವಾದ ಹೂ ಮತ್ತು ಗಿಡಮರಗಳ ನಡುವಿನ ಪುರಾತನ ಶೈಲಿಯ ನಾಗದೇವರ ಬನಕ್ಕೆ ಭೇಟಿ ನೀಡಿದರು. ಮುನಿಯಾಲು ಸಂಜೀವಿನಿ ಫಾರ್ಮ್‌ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ಮಾತನಾಡಿ ದೇಶದಲ್ಲಿ ಅನೇಕ ಸಮಸ್ಯೆಗಳ ನಡುವೆ ಬದುಕುವ ನಮಗೆ ಇನ್ನು ಹಳ್ಳಿಯ ಜೀವನಕ್ಕೆ ಅನಿವಾರ್ಯವಾಗಲಿದೆ. ದೇಶ ವಿದೇಶಗಳ ನಗರ ಜೀವನ ಬಯಸುವ ಯುವಜನತೆಯನ್ನು ಸಾವಯವ ಕೃಷಿ ಮತ್ತು ದೇಶಿಯ ಗೋತಳಿಗಳ ಹೈನುಗಾರಿಕೆಯತ್ತ ಆಕರ್ಷಿಸಿ ಬದುಕು ಕಟ್ಟಿಕೊಳ್ಳಲು ಪ್ರೇರೆಪಿಸುವ ಉದ್ದೇಶದಿಂದ ಗೋಧಾಮವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ವಿದೇಶದವರು ಕೂಡ ನಮ್ಮ ಗೋಧಾಮದ ಬಗೆಗೆ ತಿಳಿದು ಬಂದು ಅಧ್ಯಯನ ನಡೆಸಲು ಉದ್ದೇಶಿಸಿರುವುದು ನಮ್ಮ ಉದ್ದೇಶ ಸ್ವಷ್ಟವಾಗಿರುವ ಸಂಕೇತ ಮತ್ತು ಶ್ರಮ ಸಾರ್ಥಕವಾದ ಭಾವ ಮೂಡಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಮುನಿಯಾಲು ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್- ಗೋಧಾಮದ ಕಾರ್ಯದರ್ಶಿ ಸವಿತಾ ಆರ್. ಆಚಾರ್ ಮುಂತಾದವರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.