



ಬೆಂಗಳೂರು: ಪೂರ್ಣ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಸಚಿವರ ವಿರುದ್ಧ ಶಾಸಕರು ಸಿಡಿದ್ದಿದ್ದಾರೆ.
ಸಚಿವರ ದುರಹಂಕಾರಕ್ಕೆ ಬುದ್ಧಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕರು ದೂರು ನೀಡಿದ್ದಾರೆ. ಅಲ್ಲದೇ ಕೂಡಲೇ ಶಾಸಕಾಂಗ ಸಭೆ ಕರೆಯಲೇಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕರು ಆಗ್ರಹಿಸಿದ್ದಾರೆ.
ಕಳೆದ ಶಾಸಕಾಂಗ ಸಭೆಯಲ್ಲೇ ಅಸಮಾಧಾನ ಸ್ಫೋಟಗೊಂಡಿತ್ತು. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಶಾಸಕಾಂಗ ಸಭೆಯಲ್ಲೇ ಬೇಸರ ಹೊರಹಾಕಿದ್ದ ಶಾಸಕರು, ಇದೀಗ ಸಚಿವರ ವರ್ತನೆ ಬದಲಾಗದ ಹಿನ್ನೆಲೆಯಲ್ಲಿ ನೇರವಾಗಿ ಸಿಎಂಗೆ ದೂರು ನೀಡಿದ್ದಾರೆ.
ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಪತ್ರ ಬರೆದು ಶಾಸಕಾಂಗ ಸಭೆಗೆ ಆಗ್ರಹಿಸಲಾಗಿದೆ. 20ಕ್ಕೂ ಹೆಚ್ಚು ಹಿರಿಯ ಶಾಸಕರು ಪತ್ರಕ್ಕೆ ಸಹಿ ಹಾಕಿ ಸಿಎಂಗೆ ರವಾನಿಸಿದ್ದು, ಸಚಿವರು ದುರಹಂಕಾರ ತೋರಿಸುತ್ತಿದ್ದಾರೆ. ತಮ್ಮ ಕೆಲಸ ಮಾಡಿಕೊಡುತ್ತಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
ಶಾಸಕರ ಪತ್ರ ನೋಡಿ ಗಡಬಡಿಸಿ ಎದ್ದಿರುವ ಸಿಎಂ ಸಿದ್ದರಾಮಯ್ಯ ಶಾಸಕರ ಅಹವಾಲು ಆಲಿಸಲೆಂದೇ ಇದೇ ಜುಲೈ 27ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರ ವಿರುದ್ದ ಕೇವಲ ಶಾಸಕರ ಮಾತ್ರವೇ ಅಲ್ಲ ಎಂಎಲ್‌ಸಿಗಳು ಅಸಮಾಧನಗೊಂಡಿದ್ದು, ಸಚಿವರು ಶಾಸಕರಿಗೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಸಹಕಾರ ಕೊಡುತ್ತಿಲ್ಲ. ಅಭಿವೃದ್ದಿ ಕೆಲಸಗಳಿಗೆ ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೇ ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲವಾಗುವ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಪಕ್ಷ ಅಧಿಕಾರ ಬರುವಾಗ ಇವರು ಯಾರು ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಭಿನ್ನಮತ ಶಮನಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಯಾವ ಕಾರ್ಯತಂತ್ರ ರೂಪಿಸಲಿದ್ದಾರೆ ಎಂಬುದು ಸಭೆಯಲ್ಲಿ ತಿಳಿಯಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.