ನವದೆಹಲಿ: ಕೇಂದ್ರ ಸರ್ಕಾರ ಅನ್ನದಾತರಿಗೆ ದೀಪಾವಳಿ ಹಬ್ಬಕ್ಕೆ ಬೆಂಬಲ ಬೆಲೆಯ ಗಿಫ್ಟ್ ನೀಡಿದೆ. ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಭತ್ತ ಬೆಳೆಗಾರರ ಬದುಕಿಗೆ ಬೆಳಕು ಬೀರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2013-14 ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ರೂ.1,310 ಇದ್ದು, ಈಗ ಅದನ್ನು 2,300 ರೂಪಾಯಿಗೆ ಹೆಚ್ಚಿಸಲಾಗಿದೆ. ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಹಾಕಿಕೊಂಡಿದೆ ಎಂದರು.
ಭತ್ತದ ಬೆಳೆಗಾರರ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ. ಅಕ್ಟೋಬರ್ 1ರಿಂದ 2700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 ಎಲ್ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ ಎಂದರು.
ನಾಮನಿರ್ದೇಶನದ ಆಧಾರದ ಮೇಲೆ ಸಿಡಬ್ಲ್ಯೂಸಿ/ ಎಸ್ ಡಬ್ಲ್ಯೂಸಿ ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ ಪಿಇಜಿ ಯೋಜನೆಯಡಿ 31 ಎಲ್ಎಂಟಿ ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.