


ಬೆಂಗಳೂರು:** ಕರ್ನಾಟಕದ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ದಸರಾ ಕೊಡುಗೆ ನೀಡಿದ್ದು, ಇನ್ಮುಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್‌ಗಳನ್ನು ವಾಟ್ಸ್‌ಆ್ಯಪ್ ಮೂಲಕವೇ ಕಾಯ್ದಿರಿಸುವ ಡಿಜಿಟಲ್ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರಲಾಗಿದೆ. ಇದರೊಂದಿಗೆ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್‌ಗಳಿಗೆ ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನೂ ಪರಿಚಯಿಸಲಾಗಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೀಕರಿಸಿದ ಕೆಎಸ್‌ಆರ್‌ಟಿಸಿ ಅವತಾರ್ 2.0 ಮೊಬೈಲ್ ಆ್ಯಪ್ ಹಾಗೂ ವಾಟ್ಸ್‌ಆ್ಯಪ್ ಟಿಕೆಟ್ ಸೇವೆಗೆ ಚಾಲನೆ ನೀಡಿದರು.
‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ನಲ್ಲಿ ಸುರಕ್ಷಿತ ಬಳಕೆದಾರರ ಪ್ರವೇಶ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಹಿಂದಿನ ಟಿಕೆಟ್ ಕಾಯ್ದಿರಿಸುವಿಕೆಯ ವಿವರಗಳನ್ನು ವೀಕ್ಷಿಸುವುದು ಮತ್ತು ವಹಿವಾಟುಗಳನ್ನು ನಿರ್ವಹಿಸುವುದರ ಜೊತೆಗೆ ನಾಲ್ಕೂ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ದೂರುಗಳ ಸ್ಥಿತಿ ಪರಿಶೀಲನೆ, ಮೇಲ್ಮನವಿ ಸಲ್ಲಿಕೆ ಹಾಗೂ ಪರಿಹಾರದ ಪ್ರಗತಿಯನ್ನು ಗಮನಿಸುವ ಸೌಲಭ್ಯವೂ ಇರಲಿದೆ.
ಡಿಜಿಟಲ್ ಮಾಸಿಕ ಪಾಸ್ ಸೌಲಭ್ಯವನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು. ಪ್ರಯಾಣಿಕರು ಬಸ್ ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿ, ಸ್ವೀಕರಿಸಿ ಹಾಗೂ ನಿರ್ವಹಿಸಬಹುದಾಗಿದೆ. ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ.
ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್‌ಗಳ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು +91 6364940880 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಬಹುದು. ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಹಂತ ಹಂತವಾಗಿ ಮಾರ್ಗದರ್ಶನ ನೀಡಲಿದೆ.
ವಾಟ್ಸ್‌ಆ್ಯಪ್ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಅದೇ ಸಂಖ್ಯೆಯ ಮೂಲಕ ರದ್ದುಗೊಳಿಸುವ ಸೌಲಭ್ಯವೂ ಇದೆ. ಟಿಕೆಟ್ ರದ್ದತಿಗಾಗಿ ‘ಟಿಕೆಟ್ ರದ್ದತಿ’ ಆಯ್ಕೆಯನ್ನು ಆರಿಸಿ, ಕಾಯ್ದಿರಿಸುವ ವೇಳೆ ಸ್ವೀಕರಿಸಿದ ಪಿಎನ್‌ಆರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ವಹಿವಾಟಿನ ಪಾಸ್‌ವರ್ಡ್ ಅನ್ನು ನಮೂದಿಸಬೇಕು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.