



ಉಡುಪಿ: ಸಮಾಜದ ಪ್ರತಿಯೊಬ್ಬ ನಾಗರಿಕರು ಕಾನೂನುಗಳನ್ನು ಪಾಲಿಸಿದ್ದಲ್ಲಿ ಅಪರಾಧಿಕ ಪ್ರಕರಣಗಳಿಂದ ದೂರ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ರವರು ತಿಳಿಸಿದರು.
ಅವರು ಇಂದು ನಗರದ ಚಂದು ಮೈದಾನದ ಜಿಲ್ಲಾ ಸಶಸ್ತç ಮೀಸಲು ಪೊಲೀಸ್ ಪಡೆ ಕೇಂದ್ರ ಸ್ಥಾನದಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿ, ಮಾತನಾಡಿದರು.
ಪೊಲೀಸರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಯನ್ನು ಸಮಾಜದಲ್ಲಿ ಯಾರೂ ಗಮನ ಹರಿಸುವುದಿಲ್ಲ. ಪತ್ರಿಕೆಯಲ್ಲಿ ಬಂದಾಗ ಒಂದು ದಿನ ಸಹಾನುಭೂತಿ ತೋರಿಸಿ, ಮುಂದೆ ಅದನ್ನು ಮರೆಯುತ್ತಾರೆ ಹೀಗಾಗಬಾರದು, ಜನರು ದಿನನಿತ್ಯ ತಪ್ಪದೇ ಕಾನೂನು ಪಾಲನೆ ಮಾಡಬೇಕು ಎಂದರು.
ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜನರು ಸಹಕರಿಸಬೇಕು. ಪ್ರಸ್ತುತ ಪೊಲೀಸ್ ಇಲಾಖೆಯು ಸುಧಾರಿಸಿದೆ. ಆಧುನಿಕ ಶಸ್ತಾçಸ್ತçಗಳನ್ನು ಸಹ ನೀಡಲಾಗಿದೆ. ನುರಿತ ತರಬೇತಿ ಹೊಂದಿದವರನ್ನು ಪೊಲೀಸ್ ಇಲಾಖೆಗೆ ನೇಮಕಾತಿ ಮಾಡಲಾಗುತ್ತಿದೆ. ಪೊಲೀಸ್ ಕರ್ತವ್ಯ ನಿರ್ವಹಿಸುವಾಗ ಮರಣ ಹೊಂದುವವರ ಸಂಖ್ಯೆ ಸಾಕಷ್ಟು ಕಡಿಮೆಯಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, 1959 ಅಕ್ಟೋಬರ್ 21 ರಂದು ಕೇಂದ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಕರಣ್ ಸಿಂಗ್ ರವರ ನೇತೃತ್ವದಲ್ಲಿ ಭಾರತೀಯ ಪೊಲೀಸರು ಭಾರತ ಮತ್ತು ಚೀನಾ ಗಡಿಯ ಪ್ರದೇಶದ 16 ಸಾವಿರ ಅಡಿ ಎತ್ತರದ ದುರ್ಗಮ ಪ್ರದೇಶವಾದ ಹಾಟ್ ಸ್ಪ್ರಿಂಗ್ ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಅಧಿಕ ಸಂಖ್ಯೆಯಲ್ಲಿ ಸುಸಜ್ಜಿತ ಶಸ್ತ್ರಾಸ್ತ್ರ ಗಳೊಂದಿಗೆ ಚೀನಾದ ಸೈನಿಕರು ಅತಿಕ್ರಮಣಕ್ಕೆ ಯತ್ನಿಸಿದಾಗ, ಭಾರತೀಯ ಪೊಲೀಸರು, ತಮ್ಮಲ್ಲಿ ಸಾಕಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಲ್ಲದಿದ್ದರೂ ಸಹ ಚೀನಾ ದೇಶದ ಸೈನಿಕರೊಡನೆ ಕೊನೆಯ ಗುಂಡು ಹಾಗೂ ಉಸಿರಿರುವ ತನಕ ಧೈರ್ಯ ಹಾಗೂ ಶೌರ್ಯದಿಂದ ಹೋರಾಡಿ, 10 ಮಂದಿ ಪ್ರಾಣ ಕಳೆದುಕೊಂಡು 9 ಮಂದಿ ಸೆರೆ ಹಿಡಿಯಲ್ಪಟ್ಟಿದ್ದರು. ಈ ಧೀರ ಯೋಧರ ನೆನಪಿಗಾಗಿ ಪೊಲೀಸ್ ಹುತಾತ್ಮರ ದಿನವೆಂದು ಆಚರಿಸಿ, ತಮ್ಮ ಕರ್ತವ್ಯ ನಿರ್ವಹಣೆಯ ಸಮಯ ಪ್ರಾಣ ಕಳೆದುಕೊಂಡ ಪೊಲೀಸರ ಸ್ಮರಣೆ ಮಾಡುತ್ತಾ ಇಂದಿಗೂ ಕೂಡ ಆಚರಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಸಾರ್ವಜನಿಕರ ರಕ್ಷಣೆ, ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದ 189 ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಹೆಸರನ್ನು ವಾಚಿಸಿದರು. ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಸಿ.ಐ.ಡಿ ವಿಭಾಗದ ಐ.ಜಿ.ಪಿ ಪ್ರವೀಣ್ ಮಧುಕರ್ ಪವಾರ್, ಜಿ.ಪಂ. ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎ.ಎಸ್.ಪಿ ಎಸ್.ಟಿ ಸಿದ್ಧಲಿಂಗಪ್ಪ, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ಎಂ ನಾಯಕ್ ಹಾಗೂ ಮತ್ತಿತರ ಗಣ್ಯರು ಪುಷ್ಪಗಳನ್ನು ಅರ್ಪಿಸಿ, ಗೌರವ ಸಲ್ಲಿಸಿದರು.
ಡಿವೈಎಸ್ಪಿ ದಿನಕರ್ ಪಿ.ಕೆ ಅವರ ನೇತೃತ್ವದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಾಗೂ ಪೆರೇಡ್ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.