



ಉಜಿರೆ: ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು 11 ವರ್ಷಗಳ ನಂತರ ಹೊರಬಿದ್ದು, ಆರೋಪಿಯಾಗಿದ್ದ ಸಂತೋಷ್ ಅವರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಈ ಬೆನ್ನಲ್ಲೇ ಸೌಜನ್ಯಳ ಪ್ರಕರಣ ಮತ್ತೆ ನಾಡಿನಾದ್ಯಂತ ಚರ್ಚೆಗೆ ಕಾರಣವಾಗುತ್ತಿದೆ. ಈ ಬೆನ್ನಲ್ಲೇ ಸೌಜನ್ಯ ಕೇಸ್ ಕುರಿತು ಕೋರ್ಟು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
11 ವರ್ಷಗಳ ಹಿಂದೆ ಧರ್ಮಸ್ಥಳದ (Dharmastala) ನೇತ್ರಾವತಿ ತಟದಲ್ಲಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದಾಗಿನಿಂದಲೂ ನಾಡಿನ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ (Dr.D Veerendra Heggade)ಕುಟುಂಬದ ಹೆಸರು ತಳಕುಹಾಕಿಕೊಂಡಿತ್ತು. ಅಂತೆಯೇ ಇದೀಗ ಸೌಜನ್ಯ ತೀರ್ಪು ಬಂದಾಗಿನಿಂದ ಅನೇಕ ಸಂಘಟನೆಗಳು ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಎಳೆದು ತರುತ್ತಿದ್ದರು. ಇದು ಕ್ಷೇತ್ರದ ಭಕ್ತಾದಿಗಳಿಗೆ ತುಂಬಾ ನೋವುಂಟುಮಾಡಿದೆ. ಹೀಗಾಗಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ಮಾಧ್ಯಮದ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಮತ್ತು ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಅಂದಹಾಗೆ ಈ ಸಂಬಂಧ ವಾದಿಗಳಾದ ಶೀನಪ್ಪ(Sheenappa) ಮತ್ತಿತರರು ಸಲ್ಲಿಸಿರುವ ಅಸಲು ದಾವೆಯನ್ನು ಸಿಸಿಎಚ್–11 ನೇ ನ್ಯಾಯಾಲಯ ವಿಚಾರಣೆ ನಡೆಸಿ ಇದೇ 19ರಂದು ಈ ಕುರಿತಂತೆ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್, ಟಿ.ವಿ.ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು‘ ಎಂದು ನಿರ್ಬಂಧಿಸಿ ಆದೇಶಿಸಿದ್ದಾರೆ.
ಇಷ್ಟೇ ಅಲ್ಲದೆ ಸೌಜನ್ಯ (Sowjanya) ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮಾಡುತ್ತಿರುವ ವರದಿಗಳನ್ನು ನಿಲ್ಲಿಸಬೇಕು ಹಾಗೂ ಈಗಾಗಲೇ ಮಾಡಿರುವ ವರದಿಗಳನ್ನು ತೆಗೆದು ಹಾಕಬೇಕು ಎನ್ನುವುದಾಗಿ ಬೆಂಗಳೂರು ಸಿವಿಲ್ ಕೋರ್ಟ್ ಆದೇಶಿಸಿದೆ. ಜೊತೆಗೆ ಧರ್ಮಾಧಿಕಾರಿಗಳ ಯಾವುದೇ ಸಂಸ್ಥೆಗಳು ಅಥವಾ ಅವರ ವೈಯಕ್ತಿಕ ವಿಚಾರದ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುವುದು, ಆ ರೀತಿ ಹೇಳಿಕೆ ನೀಡುವಂತಹ ವಿಡಿಯೋಗಳನ್ನು ಇಲ್ಲವೇ ಮೆಸೇಜುಗಳನ್ನು ಯೂಟ್ಯೂಬ್ ಅಥವಾ ಇನ್ನಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ ನಲ್ಲಿ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ರೂಪದಲ್ಲಿ ಪೋಸ್ಟ್ ಮಾಡುವ ಹಾಗಿಲ್ಲ ಎನ್ನುವ ತಡೆಯಾಜ್ಞೆಯನ್ನು ನೀಡಿದೆ.
ದಾವೇದಾರರ ಅರ್ಜಿಯಲ್ಲಿ ಏನಿದೆ?: ‘ಬೆಳ್ತಂಗಡಿ ತಾಲ್ಲೂಕು ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಾದ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಬೆಳಹೊಂಗಲ, ಸೋಮನಾಥ್ ನಾಯಕ್, ಬಿ.ಎಂ.ಭಟ್, ವಿಠ್ಠಲ ಗೌಡ ಅವರೆಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಕೆಲ ಮಾಧ್ಯಮಗಳು ಕ್ಷೇತ್ರದ ವಿರುದ್ಧ ಮತ್ತು ಕ್ಷೇತ್ರಾಧಿಕಾರಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಅವಹೇಳನಕಾರಿಯಾಗಿ ವರದಿ ಮಾಡುತ್ತಿವೆ‘ ಎಂದು ದಾವೆದಾರರು ಅರ್ಜಿಯಲ್ಲಿ ವಿವರಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.