



ಮಂಗಳೂರು: ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ರಾಜ್ಯಸರಕಾರ ಕರೆಕೊಟ್ಟಿದ್ದು ಈ ಪ್ರಯುಕ್ತ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‍ಬೈಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಬಹಳ ವಿಜೃಂಬಣೆಯಿಂದ ಆಚರಿಸಲಾಯಿತು.

ಡಾ. ಶ್ರೀ ಕೃಷ್ಣಭಟ್ ಸುಣ್ಣಂಗುಳಿ ( ಕನ್ನಡ ಉಪನ್ಯಾಸಕರು ಎಕ್ಸ್‍ಪರ್ಟ್ ಕಾಲೇಜು ವಳಚ್ಚಿಲ್) ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರಭಟ್ ಅವರು ಕಾರ್ಯಕ್ರಮವನ್ನು ದೀಪ ಬೆಳಗುವ ಮುಖಾಂತರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಾಡಗೀತೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಕವಿಯ ‘ಎಲ್ಲಾದರೂ ಇರು ಎಂತಾದರು ಇರು’, ದ.ರಾ.ಬೇಂದ್ರೆಯವರ ‘ಒಂದೇ ಒಂದೇ ಕರ್ಣಾಟಕ ಒಂದೇ’, ಸಿದ್ಧಯ್ಯ ಪುರಾಣಿಕರ ‘ಹೊತ್ತಿತ್ತೊ ಹೊತ್ತಿತ್ತು ಕನ್ನಡದೀಪ’, ಚೆನ್ನವೀರ ಕವಿಯ ‘ಹೆಸರಾಯಿತು ಕರ್ಣಾಟಕ ಉಸಿರಾಗಲಿ ಕನ್ನಡ’ ಮೊದಲಾದ ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ಸುಸಂದರ್ಭದಲ್ಲಿ ಡಾ.ಶ್ರೀಕೃಷ್ಣಭಟ್ ಸುಣ್ಣಂಗುಳಿ ಇವರಿಂದ ಲಕ್ಷ್ಮೀಶ ಕವಿಯ “ಜೈಮಿನಿಭಾರತ” ಹಾಗೂ ರನ್ನ ಕವಿಯ “ಗದಾಯುದ್ಧ” ಕಾವ್ಯಭಾಗದಿಂದ ಆಯ್ದಭಾಗದ ಗಮಕ ಗಾಯನ ಮೂಡಿಬಂದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದಿತು.
ಪ್ರಥಮ ಪಿ.ಯು.ಸಿ ವಿಧ್ಯಾರ್ಥಿನಿಯಾದ ಸಾಕ್ಷಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಗೆ ಸಿಹಿ ಹಂಚಲಾಯಿತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.