logo
WhatsApp Image 2026-04-02 at 14.46.04.jpeg
hindalco everlast.jpeg

ಮಂಗಳೂರು–ಗೋವಾ ವಂದೇ ಭಾರತ್‌ ರೈಲು ಯಶವಂತಪುರದವರೆಗೆ ವಿಸ್ತರಣೆ: ಕರಾವಳಿಗೆ ಬೆಂಗಳೂರಿನೊಂದಿಗೆ ಹೊಸ ಸಂಪರ್ಕ

ಟ್ರೆಂಡಿಂಗ್
share whatsappshare facebookshare telegram
30 Sept 2026
post image

ಬೆಂಗಳೂರು:** ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ. ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ.

ಕರಾವಳಿ ಭಾಗದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರ ಬರೆದು ಈ ಮಾಹಿತಿ ನೀಡಿದ್ದಾರೆ.

2023ರ ಡಿಸೆಂಬರ್‌ನಿಂದ ಮಂಗಳೂರು ಸೆಂಟ್ರಲ್–ಮಡಗಾಂವ್ ನಡುವೆ ಸಂಚರಿಸುತ್ತಿದ್ದ 20646/20645 ಸಂಖ್ಯೆಯ ವಂದೇ ಭಾರತ್ ರೈಲು, ಇನ್ನು ಮುಂದೆ ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ–ಮಡಗಾಂವ್–ಯಶವಂತಪುರ ಮಾರ್ಗದಲ್ಲಿ ಹೊಸ ರೈಲು ಸಂಖ್ಯೆಗಳೊಂದಿಗೆ ಸಂಚರಿಸುವ ಸಾಧ್ಯತೆ ಇದೆ.

ಸಂಭಾವ್ಯ ವೇಳಾಪಟ್ಟಿ

ರೈಲ್ವೆ ಇಲಾಖೆ ಅಧಿಕೃತ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಲಭ್ಯವಿರುವ ಮಾಹಿತಿಯಂತೆ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ಮಂಗಳೂರು ತಲುಪಿ ಸಂಜೆ ಗೋವಾ ತಲುಪುವಂತೆ ವೇಳಾಪಟ್ಟಿ ರೂಪಿಸಲಾಗಿದೆ.

  • ಯಶವಂತಪುರ–ಮಡಗಾಂವ್ (26655): ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 7.15ಕ್ಕೆ ಮಡಗಾಂವ್ ತಲುಪುವ ಸಾಧ್ಯತೆ.
  • ಮಡಗಾಂವ್–ಯಶವಂತಪುರ (26656): ಬೆಳಗ್ಗೆ 5.30ಕ್ಕೆ ಮಡಗಾಂವ್‌ನಿಂದ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುವ ಸಾಧ್ಯತೆ.

ಪ್ರಮುಖ ನಿಲ್ದಾಣಗಳು

ವಂದೇ ಭಾರತ್ ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುವ ಸಾಧ್ಯತೆ ಇದೆ.

ಘಾಟ್‌ ಮಾರ್ಗದಲ್ಲಿ ಸುರಕ್ಷತಾ ಕ್ರಮ

ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್‌ ಮಾರ್ಗದಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ರೈಲಿಗೆ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಗರಿಷ್ಠ 30 ಕಿ.ಮೀ ವೇಗದ ಮಿತಿ ಇರಲಿದೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ಅತ್ಯಾಧುನಿಕ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ಎಂಟು ಬೋಗಿಗಳ ಎರಡು ರೇಕ್‌ಗಳನ್ನು ಬಳಸುವ ಸಾಧ್ಯತೆ ಇದೆ. ಸೆ.10ರಂದು ಇದೇ ಮಾರ್ಗದಲ್ಲಿ 16 ಬೋಗಿಗಳ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

ಪ್ರಯಾಣದ ಅವಧಿ ಕಡಿತಕ್ಕೆ ಒತ್ತಾಯ

ರೈಲನ್ನು ಯಶವಂತಪುರದವರೆಗೆ ವಿಸ್ತರಿಸುವ ನಿರ್ಧಾರಕ್ಕೆ ಕರಾವಳಿಯ ಪ್ರಯಾಣಿಕರಿಂದ ಸ್ವಾಗತ ವ್ಯಕ್ತವಾಗಿದ್ದರೂ, ಪ್ರಸ್ತಾವಿತ ವೇಳಾಪಟ್ಟಿಯ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದೆ. ಸುಮಾರು 13 ಗಂಟೆಗಳ ಪ್ರಯಾಣದ ಅವಧಿಯನ್ನು ಕನಿಷ್ಠ 11 ಗಂಟೆಗಳಿಗೆ ಇಳಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಮಂಗಳೂರು–ತಿರುವನಂತಪುರಂ ವಂದೇ ಭಾರತ್ ಮಾದರಿಯಲ್ಲಿ ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟು, ಸಂಜೆ ಅಥವಾ ರಾತ್ರಿ ಮಂಗಳೂರಿಗೆ ಮರಳುವ ರೀತಿಯಲ್ಲಿ ವೇಳಾಪಟ್ಟಿ ರೂಪಿಸಿದರೆ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

ರಾಜಧಾನಿಗೆ ಕಚೇರಿ ಕೆಲಸ, ಉದ್ಯಮ ಹಾಗೂ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ತೆರಳುವ ಕರಾವಳಿ ಭಾಗದ ಜನರಿಗೆ ಈ ರೈಲು ಸೇವೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.