logo
WhatsApp Image 2026-04-02 at 14.46.04.jpeg
hindalco everlast.jpeg

ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಕ್ಲಿನಿಕ್ ತೆರೆದ ನಕಲಿ ವೈದ್ಯರು! ಕರ್ನಾಟಕದಲ್ಲಿ 582 ನಕಲಿ ಕ್ಲಿನಿಕ್‌ಗಳಿಗೆ ಆರೋಗ್ಯ ಇಲಾಖೆ ಬೀಗ

ಟ್ರೆಂಡಿಂಗ್
share whatsappshare facebookshare telegram
7 Sept 2026
post image

ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಕ್ಲಿನಿಕ್ ತೆರೆದ ನಕಲಿ ವೈದ್ಯರು!

ಕರ್ನಾಟಕದಲ್ಲಿ 582 ನಕಲಿ ಕ್ಲಿನಿಕ್‌ಗಳಿಗೆ ಆರೋಗ್ಯ ಇಲಾಖೆ ಬೀಗ

ಬೆಂಗಳೂರು: ‘ವೈದ್ಯೋ ನಾರಾಯಣೋ ಹರಿ’ ಎಂಬ ನಂಬಿಕೆಯಿಂದ ವೈದ್ಯರನ್ನು ದೇವರ ಸ್ವರೂಪವೆಂದು ಗೌರವಿಸುವ ನಮ್ಮ ಸಮಾಜದಲ್ಲೇ ಕೆಲವರು ವೈದ್ಯರ ಸೋಗಿನಲ್ಲಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯಾವುದೇ ಅಧಿಕೃತ ವೈದ್ಯಕೀಯ ಪದವಿ ಇಲ್ಲದಿದ್ದರೂ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ಪಡೆದ ಅನುಭವದ ಆಧಾರದ ಮೇಲೆ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದವರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.

582ಕ್ಕೂ ಹೆಚ್ಚು ನಕಲಿ ಕ್ಲಿನಿಕ್‌ಗಳ ವಿರುದ್ಧ ಕ್ರಮ

ಕರ್ನಾಟಕದಲ್ಲಿ 2024ರಿಂದ ಈವರೆಗೆ ಆರೋಗ್ಯ ಇಲಾಖೆ 582ಕ್ಕೂ ಹೆಚ್ಚು ನಕಲಿ ಕ್ಲಿನಿಕ್‌ಗಳನ್ನು ಪತ್ತೆಹಚ್ಚಿ ಮುಚ್ಚಿಸಿದೆ. ಹೈಕೋರ್ಟ್ ಸೂಚನೆಯ ಬಳಿಕ 2025ರಲ್ಲಿ ನಕಲಿ ವೈದ್ಯರು ಹಾಗೂ ಅಕ್ರಮ ಚಿಕಿತ್ಸಾ ಪದ್ಧತಿಗಳ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 87 ಮಂದಿಗೆ ದಂಡ ವಿಧಿಸಲಾಗಿದ್ದು, 29 ಜನರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ.

ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಪ್ರಕರಣ

ನಕಲಿ ವೈದ್ಯರ ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಬೆಳಕಿಗೆ ಬಂದಿವೆ. ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 127 ಪ್ರಕರಣಗಳು ಪತ್ತೆಯಾಗಿವೆ.

  • ರಾಯಚೂರು: 124
  • ಧಾರವಾಡ: 75
  • ಕೋಲಾರ: 31
  • ವಿಜಯಪುರ: 24
  • ಬಳ್ಳಾರಿ: 23
  • ದಕ್ಷಿಣ ಕನ್ನಡ: 20
  • ಚಿಕ್ಕಬಳ್ಳಾಪುರ: 17
  • ಬೆಂಗಳೂರು ನಗರ: 16
  • ಕೊಪ್ಪಳ: 14

ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ‘ವೈದ್ಯ’ರಾದವರು!

ಆರೋಗ್ಯ ಇಲಾಖೆ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪತ್ತೆಯಾದವರಲ್ಲಿ ಬಹುತೇಕರು ಯಾವುದೇ ಅಧಿಕೃತ ಮೆಡಿಕಲ್ ಪದವಿ ಹೊಂದಿರಲಿಲ್ಲ. ಕೆಲವರು ಆಸ್ಪತ್ರೆಗಳಲ್ಲಿ ನರ್ಸ್, ವಾರ್ಡ್‌ಬಾಯ್ ಅಥವಾ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರು.

ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆ ನೀಡುವುದನ್ನು ಗಮನಿಸಿ ಪ್ರಾಯೋಗಿಕ ಅನುಭವ ಪಡೆದ ಬಳಿಕ, ಅದನ್ನೇ ಆಧಾರವಾಗಿಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ.

ಇಂತಹವರು ಜ್ವರ, ಕೆಮ್ಮು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಅಲೋಪತಿ ಔಷಧ, ಇಂಜೆಕ್ಷನ್ ಹಾಗೂ ಗ್ಲುಕೋಸ್ ನೀಡುತ್ತಿದ್ದರು. ಇನ್ನು ಕೆಲವರು ಆಯುರ್ವೇದ ಅಥವಾ ಹೋಮಿಯೋಪತಿ ಪದವಿ ಹೊಂದಿದ್ದರೂ, ನಿಯಮ ಉಲ್ಲಂಘಿಸಿ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಪತ್ತೆಯಾಗಿದೆ.

ಕ್ಲಿನಿಕ್‌ಗೆ ಹೋಗುವ ಮುನ್ನ ಎಚ್ಚರ!

ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಯಾವುದೇ ಕ್ಲಿನಿಕ್‌ಗೆ ತೆರಳುವ ಮುನ್ನ ಅಲ್ಲಿನ ವೈದ್ಯರ ಅಧಿಕೃತ ವೈದ್ಯಕೀಯ ಪದವಿ ಮತ್ತು ಮೆಡಿಕಲ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ ಇರುವುದನ್ನು ಪರಿಶೀಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಜನರ ಜೀವದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.