


ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಅಳವಡಿಸಿರುವ ಎಐ ಆಧಾರಿತ ಕ್ಯಾಮೆರಾ ಇದೀಗ ವಿಚಿತ್ರ ಕಾರಣಕ್ಕೆ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಕೂಟರ್ನಲ್ಲಿ ಗಿಟಾರ್ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ, ಗಿಟಾರ್ ಅನ್ನು ವ್ಯಕ್ತಿಯೆಂದು ಭಾವಿಸಿ ಹೆಲ್ಮೆಟ್ ಧರಿಸಿಲ್ಲ ಎಂದು ಚಲನ್ ಜಾರಿ ಮಾಡಲಾಗಿದೆ.
ಸೌವಿಕ್ ದತ್ತ ಎಂಬುವವರು ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಮಾರ್ಗಮಧ್ಯೆ ಅಳವಡಿಸಲಾಗಿದ್ದ ಎಐ ಕ್ಯಾಮೆರಾ, ಬೆನ್ನಿನ ಮೇಲಿದ್ದ ಗಿಟಾರ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿದೆ ಎನ್ನಲಾಗಿದೆ. ಇದಾದ ಬಳಿಕ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಆನ್ಲೈನ್ ಮೂಲಕ ದಂಡದ ಚಲನ್ ಕಳುಹಿಸಲಾಗಿದೆ. ಚಲನ್ನೊಂದಿಗೆ ಸ್ಕೂಟರ್ನ ಫೋಟೋ ಕೂಡ ಇದ್ದು, ಅದನ್ನು ನೋಡಿದ ಸೌವಿಕ್ ದತ್ತ ಅವರು ಅಚ್ಚರಿಗೊಂಡಿದ್ದಾರೆ.
ಎಐ ಕ್ಯಾಮೆರಾದ ಈ ಯಡವಟ್ಟಿನ ಫೋಟೋ ಹಾಗೂ ಚಲನ್ ವಿವರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಎಐ ಆಧಾರಿತ ಸಂಚಾರ ನಿಯಮ ಜಾರಿ ವ್ಯವಸ್ಥೆಯಲ್ಲಿನ ಇಂತಹ ತಪ್ಪುಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಸೌವಿಕ್ ದತ್ತ ಅವರು ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಪ್ರಕರಣವನ್ನು ಪರಿಶೀಲಿಸಿ ತಪ್ಪಾಗಿ ವಿಧಿಸಲಾಗಿರುವ ದಂಡದ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.