logo
WhatsApp Image 2026-04-02 at 14.46.04.jpeg
hindalco everlast.jpeg

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ಉಡುಪಿ ಜಿಲ್ಲೆಯಲ್ಲಿ ಮೊದಲ ಮೃತ ದಾನಿ ಯಕೃತ್ತು (ಲಿವರ್) ಕಸಿ ಶಸ್ತ್ರಚಿಕಿತ್ಸೆ

ಟ್ರೆಂಡಿಂಗ್
share whatsappshare facebookshare telegram
2 Apr 2026
post image

ಮಣಿಪಾಲ, ಎ.1: ಮಾಹೆಯ ಸಹ ಘಟಕವಾದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪರಿಣಿತ ವೈದ್ಯರು ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಮೃತ ದಾನಿಯೊಬ್ಬರ ಯಕೃತ್‌ನ(ಲೀವರ್) ಕಸಿ ಶಸ್ತ್ರಚಿಕಿತ್ಸೆಯನ್ನು ರೋಗಿ ಯೊಬ್ಬರ ಮೇಲೆ ಯಶಸ್ವಿಯಾಗಿ ನಡೆಸಿದ್ದಾರೆ. ಯಕೃತ್ ಕಸಿ ಮಾಡಿಸಿಕೊಂಡ 56ರ ಹರೆಯದ ರೋಗಿ ಈಗ ಆರೋಗ್ಯವಂತರಾಗಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಡಾ.ರಾಮದಾಸ ಎಂ.ಪೈ ಬ್ಲಾಕ್‌ನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹೆಯ ಬೋಧನಾ ಆಸ್ಪತ್ರೆಯ ಸಿಒಒ ಡಾ.ಸುಧಾಕರ ಕಾಂತಿಪುಡಿ ತಿಳಿಸಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕೃಿಯಗೊಂಡ 42ಹರೆಯದವರ ಲೀವರ್‌ನ್ನು ದಾನ ಮಾಡಲು ದು:ಖಿತ ಕುಟುಂಬ ನಿರ್ಧರಿಸಿದ್ದು, ಇದರಿಂದಾಗಿ ಯಕೃತ್‌ನ ತೀವ್ರ ತೊಂದರೆಯಿಂದ ಬಳಲುತಿದ್ದ ಕೋಟೇಶ್ವರ ಮೂಲದ ರೋಗಿ ಅದನ್ನು ಪಡೆದು ಆರೋಗ್ಯವನ್ನು ಮರಳಿ ಪಡೆಯಲು ಸಾಧ್ಯವಾಯಿತು ಎಂದವರು ಹೇಳಿದರು.

ದೀರ್ಘಕಾಲದ ಯಕೃತ್ (ಲೀವರ್) ಕಾಯಿಲೆ ಮತ್ತು ಪೋರ್ಟಲ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯನ್ನು ಮೃತ ದಾನಿಯ ಕಸಿ ಕಾರ್ಯಕ್ರಮದಡಿಯಲ್ಲಿ ವಿವರವಾದ ಬಹು ಆಯಾಮ ಮೌಲ್ಯಮಾಪನಕ್ಕೆ ಒಳಪಡಿಸಿ, ಎಚ್ಚರಿಕೆಯ ಯೋಜನೆ ಮತ್ತು ಅಂಗಾಂಗ ಹಂಚಿಕೆ ಮಾರ್ಗಸೂಚಿಗಳಂತೆ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಡಾ.ಸುಧಾಕರ್ ವಿವರಿಸಿದರು.

ಶಸ್ತ್ರಚಿಕಿತ್ಸೆಯ ನಂತರ, ಅವರನ್ನು ವೈದ್ಯರ ತೀವ್ರ ನಿಗಾದಲ್ಲಿರಿಸಿ ರಚನಾತ್ಮಕ ಮೇಲ್ವಿಚಾರಣೆ ಮತ್ತು ಪ್ರೋಟೋ ಕಾಲ್-ಚಾಲಿತ ಆರೈಕೆಯೊಂದಿಗೆ ಕಸಿ ಆರೈಕೆಗಾಗಿಯೇ ಮೀಸಲಾದ ಐಸಿಯುನಲ್ಲಿ ಇರಿಸಲಾಯಿತು. ಅವರ ಚೇತರಿಕೆ ಸ್ಥಿರವಾಗಿ ಮುಂದುವರೆದ ಕಾರಣ ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಗೊಳಿಸಲಾಗಿದೆ ಎಂದರು.

ಕಸ್ತೂರ್ಬಾ ಆಸ್ಪತೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಮತವರ ತಂಡ ಆರಂಭಿಕ ಮೌಲ್ಯಮಾಪನದ ವೇಳೆ ಯಕೃತ್ ಕಸಿಯಿಂದ ಮಾತ್ರ ಅವರು ಬದುಕುಳಿದು ಚೇತರಿಕೆಗೆ ಉತ್ತಮ ಅವಕಾಶವಿದೆ ಎಂಬ ನಿರ್ಧಾರಕ್ಕೆ ಬಂದಿತ್ತು. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಜಯಂತ್ ರೆಡ್ಡಿ ನೇತೃತ್ವದ ತಂಡ ಮಣಿಪಾಲದ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ.ಬೆಂಗಳೂರಿನ ಡಾ.ದೀಪ್ತಿ ರಾಮಚಂದ್ರ, ಮಣಿಪಾಲ ಗ್ಯಾಸ್ಟ್ರೋ ಎಂಟರಾಲಜಿ ಸರ್ಜರಿ ವಿಭಾಗದ ಡಾ.ಭರತ್‌ಕುಮಾರ್ ಭಟ್ ಮತ್ತವರ ಬಹುಶಿಸ್ತೀಯ ತಂಡವನ್ನು ಇದರಲ್ಲಿ ಪಾಲ್ಗೊಂಡಿತ್ತು ಎಂದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಯುತ್ತಿ ರುವ ಲಿವರ್ ಕಸಿ ಶಸ್ತ್ರಚಿಕಿತ್ಸೆ ಉಡುಪಿ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ಹೊಸ ಆಶಾಕಿರಣವಾಗಿದೆ ಎಂದು ಕೆಎಂಸಿಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ತಿಳಿಸಿದರು.

ಮಾನವ ದೇಹದ ಬಹುಮುಖ್ಯ ಅಂಗವಾಗಿರುವ ನೂರಾರು ಕಾರ್ಯಗಳನ್ನು ನೆರವೇರಿಸುವ ಯಕೃತ್‌ನ್ನು ಭಾಗಶ: ದಾನ ಮಾಡಿದರೂ, ಕೆಲವೇ ಸಮಯದಲ್ಲಿ ಮತ್ತೆ ಅದು ಚಿಗುರಿಕೊಳ್ಳುತ್ತದೆ. ಮಾನವ ದೇಹದಲ್ಲಿ ಮತ್ತೆ ಬೆಳೆಯುವ ಏಕೈಕ ಅಂಗ ಇದಾಗಿದೆ. ಹೀಗಾಗಿ ಸಂಬಂಧಿಗಳಲ್ಲಿ ಯಾರಾದರೂ ಯಕೃತ್ ತೊಂದರೆಗೊಳಗಾಗಿದ್ದರೆ ಅವರ ಕುಟುಂಬದವರೇ ಯಾರಾದರೂ ತನ್ನ ಯಕೃತ್‌ನ ಕೆಲ ಭಾಗವನ್ನು ದಾನ ಮಾಡಬಹುದು ಎಂದು ಡಾ.ಜಯಂತ್ ರೆಡ್ಡಿ ತಿಳಿಸಿದರು.

ದೇಶದಲ್ಲೀಗ 25,000 ಮಂದಿ ಯಕೃತ್ ದಾನಿಗಳಿಗಾಗಿ ಕಾಯತಿದ್ದಾರೆ. ಒಂದು ವರ್ಷದಲ್ಲಿ ಸುಮಾರು 1000 ಮಂದಿ ಮಾತ್ರ ದಾನಿಗಳ ಯಕೃತ್ ಕಸಿಯ ಮೂಲಕ ಮರುಜೀವ ಪಡೆದಿದ್ದಾರೆ ಎಂದರು. ಅತಿಯಾದ ಮದ್ಯಪಾನ, ದೇಹದಲ್ಲಿ ಅತಿಯಾದ ಕೊಬ್ಬಿನಂಶ ಶೇಖರಣೆ ಹಾಗೂ ವಿವಿಧ ಸೋಂಕುಗಳಿಂದ ಯಕೃತ್ ರೋಗಪೀಡಿತವಾಗುತ್ತದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಡಾ. ದೀಪ್ತಿ ರಾಮಚಂದ್ರ, ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಡಾ. ಶಿರನ್ ಶೆಟ್ಟಿ, ಡಾ. ಜಯಂತ್ ರೆಡ್ಡಿ, ಡಾ. ಭರತ್ ಭಟ್ ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.