



ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಪ್ರಗತಿಯಲ್ಲಿದ್ದು, ಕೂಲಿಯಾಳುಗಳ ಸಮಸ್ಯೆ ಹಾಗೂ ಕಟಾವಿನ ಅವಧಿಯಲ್ಲಿ ಮಳೆ ಬರುವುದರಿಂದ ರೈತರು ಭತ್ತದ ಬೆಳೆ ಕಟಾವಿಗೆ ಅನಿವಾರ್ಯವಾಗಿ ಕಂಬೈನ್ಡ್ ಹಾರ್ವೆಸ್ಟರ್ ಗಳನ್ನು ಅವಲಂಭಿಸಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳ ಕಂಬೈನ್ಡ್ ಹಾರ್ವೆಸ್ಟರ್ ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಸನ್ನಿವೇಶದ ಪ್ರಯೋಜನ ಪಡೆದು ಕೆಲವೊಂದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಭತ್ತ ಕಟಾವಿಗೆ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟಣೆಗಳು ಹಾಗೂ ರೈತರಿಂದ ಜಿಲ್ಲಾಡಳಿತಕ್ಕೆ ದೂರುಗಳು ಸ್ವೀಕೃತವಾಗಿರುತ್ತದೆ.
ಜಿಲ್ಲೆಯಲ್ಲಿ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕರ್ತಾರ್ ಮಾದರಿ ಕಂಬೈನ್ಡ್ ಹಾರ್ವೆಸ್ಟರ್ ನ ಕಟಾವಿಗೆ ಉಪಕರಣ ಸಾಗಾಟ ವೆಚ್ಚ ಹೊರತುಪಡಿಸಿ ಜಿಲ್ಲಾ ಸಮಿತಿಯಿಂದ ಪ್ರತಿ ಗಂಟೆಗೆ 1800 ರೂ. ಬಾಡಿಗೆ ದರವನ್ನು ನಿಗದಿಪಡಿಸಿದ್ದು, ರೈತರು ಮುಂಚಿತವಾಗಿ ಕೃಷಿ ಯಂತ್ರಧಾರೆ ಕೇಂದ್ರದ ನಿರ್ವಹಣೆ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ನೊಂದಣಿ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದ೦ದು ಕಟಾವು ಕಾರ್ಯಕ್ಕೆ ಉಪಕರಣ ಪಡೆಯಬಹುದಾಗಿದೆ.
ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕೇವಲ 7 ಸಂಖ್ಯೆಯ ಕಟಾವು ಯಂತ್ರಗಳು ಮಾತ್ರ ಲಭ್ಯವಿದ್ದು, ಜಿಲ್ಲೆಯ ರೈತರ ಬೇಡಿಕೆಯನ್ನು ಪೂರೈಸಲು ಖಾಸಗಿಯಾಗಿ ಬರುವ ಕಟಾವು ಯಂತ್ರಗಳ ಅವಶ್ಯಕತೆಯಿದ್ದು, ಖಾಸಗಿ ಕಟಾವು ಯಂತ್ರ ಮಾಲಕರು ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ, ಕೃಷಿ ಯಂತ್ರಧಾರೆ ಕೇಂದ್ರದ ಬಾಡಿಗೆ ದರವನ್ನು ಮಾನದಂಡವಾಗಿಟ್ಟುಕೊ೦ಡು ರೈತರೊಂದಿಗೆ ಕಟಾವು ದರದ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ, ನ್ಯಾಯೋಚಿತ ದರದಲ್ಲಿ ರೈತರಿಗೆ ಹೆಚ್ಚಿನ ಹೊರೆಯಾಗದ ಧಾರಣೆಯನ್ನು ನಿಗದಿಪಡಿಸಿಕೊಂಡು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಭತ್ತದ ಕಟಾವು ಕಾರ್ಯವನ್ನು ಕೈಗೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.