



ಮಂಗಳೂರು:
ಪಶ್ಚಿಮಘಟ್ಟ ಪ್ರದೇಶದ ತಪ್ಪಲಿನಲ್ಲಿ ವಾಸಿಸುವ ಜನತೆಯ ಅನುಕೂಲಕ್ಕಾಗಿ ಕಸ್ತೂರಿ ರಂಗನ್ ವರದಿ ಹಾಗೂ ಹುಲಿ ಯೋಜನೆ ಜಾರಿಯನ್ನು ಕೇಂದ್ರ ಸರಕಾರ ಕೈಬಿಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅರಣ್ಯ ಸಚಿವನಾಗಿದ್ದಾಗ ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರ ಕಸ್ತೂರಿ ರಂಗನ್ ವರದಿಯ ಕರಡು ಪ್ರತಿ ಸಿದ್ಧಪಡಿಸಿತ್ತು. ಇದನ್ನು ಜಾರಿಗೊಳಿಸಿದರೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ದೂರುಗಳು ಕೇಳಿ ಬಂತು. ಆಗ ಪ್ರತಿಪಕ್ಷ ಬಿಜೆಪಿ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಜನತೆಯನ್ನು ಬೀದಿಗಿಳಿದು ಪ್ರತಿಭಟಿಸುವಂತೆ ಕುಮ್ಮಕ್ಕು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದಲ್ಲಿ ಹಾಲಿ
ಇರುವ ಸೂಕ್ಷ್ಮ ಪ್ರದೇಶ, ಅಭಯಾರಣ್ಯಗಳನ್ನು ಮಾತ್ರ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡಿಸಿದರೆ ಸಾಕು, ಹೆಚ್ಚುವರಿ ವ್ಯಾಪ್ತಿ ವಿಸ್ತರಿಸದಂತೆ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗಿತ್ತು. ಆದರೆ ಅದೇ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿ ಅದನ್ನು ಪರಿಷ್ಕರಿಸುವಂತೆ ರಾಜ್ಯಕ್ಕೆ ವಾಪಸ್ ಕಳುಹಿಸಿತ್ತು. ಪ್ರತಿ ಬಾರಿಯೂ ರಾಜ್ಯ ಸರಕಾರ ಅದೇ ವರದಿಯನ್ನು ಕೇಂದ್ರಕ್ಕೆ ಕಳುಹಿಸುವುದು, ಕೇಂದ್ರ ವಾಪಸ್ ಕಳುಹಿಸುವುದು ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.
ಈಗ ಕಸ್ತೂರಿ ರಂಗನ್ ವರದಿ ಬಗ್ಗೆ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವರದಿಯನ್ನು ರದ್ದುಪಡಿಸುವ ಅಧಿಕಾರ ಇರುವುದು ಕೇಂದ್ರಕ್ಕೆ ಮಾತ್ರ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು, ಪಶ್ಚಿಮ ಘಟ್ಟ ತಪ್ಪಲಿನ ಜನತೆಯ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಬಿಜೆಪಿ ಮುಖಂಡರು ಈ ಯೋಜನೆ ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಲಿ. ಇಲ್ಲದಿದ್ದರೆ ಕಸ್ತೂರಿ ರಂಗನ್ ವರದಿ ವಿಚಾರ ರಾಷ್ಟ್ರೀಯ ಪರಿಸರ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಮತ್ತೆ ಅಲ್ಲಿಂದ ಅನುಮತಿ ಪಡೆದು ರದ್ದುಗೊಳಿಸಬೇಕಾಗುತ್ತದೆ. ಹಾಗಾಗಿ ಬಿಜೆಪಿಗರು ಬಾಯಿಮಾತಿನಲ್ಲಿ ವಿರೋಧ ಬದಲು ಕಸ್ತೂರಿ ರಂಗನ್ ವರದಿ ಹಾಗೂ ಹುಲಿ ಯೋಜನೆಯನ್ನು ಕೈಬಿಡುವಂತೆ ಕೇಂದ್ರವನ್ನು ಒತ್ತಾಯಿಸಲಿ ಎಂದರು.
ಮುಖಂಡರಾದ ಜಿ.ಎ.ಬಾವಾ, ಕೋಡಿಜಾಲು ಇಬ್ರಾಹಿಂ, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಪ್ರಕಾಶ್ ಸಾಲಿಯಾನ್, ಸಬಿತಾ ಮಿಸ್ಕಿತ್, ಎಂ.ಎಸ್.ಸಲೀಂ,
ಅಬ್ದುಲ್ ರವೂಫ್, ಅಶ್ರಫ್, ನೀರಜ್‌ಪಾಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.