



ಶೇಷ ಕೃಷ್ಣ ಭಟ್ ಪುತ್ತೂರು
ಕಂಚಿನ ಕಂಠ, ಕಲಾವಿದರನ್ನು ನಾಟ್ಯವಾಡುವಂತೆ ಮಾಡೋ ಹಾಡುಗಾರಿಕೆ, ಪ್ರಸಂಗವನ್ನು ಕೊಂಡೊಯ್ಯೋ ಪದ್ದತಿ ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರನ್ನು ತನ್ಮಯರನ್ನಾಗಿ , ಮಂತ್ರ ಮುಗ್ಧರನ್ನಾಗಿ ಮಾಡೋ ಭಾಗವತಿಕೆ. ಒಟ್ಟಿಗೆ ಹೇಳಬೇಕಂದ್ರೆ ಯಕ್ಷಗಾನ ಲೋಕದಲ್ಲಿ ಅಗ್ರಪಂಕ್ತಿ ಯ ಭಾಗವತರು ಪದ್ಯಾಣ ಗಣಪತಿ ಭಟ್... ಇವತ್ತು ಅವ್ರು ಇಹಲೋಕವನ್ನು ತೃಜಿಸಿದ್ದಾರೆ ಅಂದಾಗ ನಿಜಕ್ಕೂ ಒಬ್ಬ ಯಕ್ಷಪ್ರೇಮಿಯಾಗಿ ಅವರ ಅಭಿಮಾನಿಯಾಗಿ ದುಃಖವಾಗಿದ್ದು ನಿಜ. ಕೇವಲ 66 ವರ್ಷ ವಾಗಿತ್ತಷ್ಟೇ...ಮೇಳ ದಲ್ಲಿ ಹಾಡುವುದನ್ನು ಬಿಟ್ಟಿದ್ದರೂ ಕೂಡಾ ವಿಶೇಷ ಪ್ರದರ್ಶನಗಳಲ್ಲಿ ಅವರ ಭಾಗವತಿಕೆಯನ್ನು ಕೇಳೋದಕ್ಕೆ ಅವಕಾಶವಿತ್ತು..ಆದ್ರೆ ಇನ್ಮುಂದೆ ಆ ಅವಕಾಶ ಖಂಡಿತವಾಗಲೂ ಇಲ್ಲ.
ಪದ್ಯಾಣ ಗಣಪತಿ ಭಟ್ ..ಗಣಪಣ್ಣ ಅಂತಾನೇ ಫೇಮಸ್... ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಈ ಹೆಸರು ಗೊತ್ತಿಲ್ಲದೇ ಇರೋ ಯಕ್ಷಗಾನ ಪ್ರೇಮಿಗಳೇ ಇರ್ಲಿಕ್ಕಿಲ್ಲ. ಈ 50 ವರ್ಷಗಳಲ್ಲಿ ಪದ್ಯಾಣ ಗಣಪಣ್ಣ ಯಕ್ಷಗಾನ ಲೋಕದ ಉತ್ತುಂಗಕ್ಕೆ ಏರಿರೋದ್ರಲ್ಲಿ ಅನುಮಾನವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಗೋಳ್ತಾಜೆಯಲ್ಲಿ 1955 ರಲ್ಲಿ ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ 3 ನೇ ಮಗನಾಗಿ ಪದ್ಯಾಣ ಗಣಪತಿ ಭಟ್ ಜನಿಸಿದ್ರು. ಅವರ ಮೂಲ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಕುಟುಂಬ ಆಗಿರೋದ್ರಿಂದ ಪದ್ಯಾಣ ಅನ್ನೋದು ಅವರ ಹೆಸರಿನಲ್ಲೇ ಸೇರಿತ್ತು. ಇನ್ನು ತಮ್ಮ ಬಾಲ್ಯಾವಸ್ಥೆಯಲ್ಲೇ ಯಕ್ಷಗಾನದತ್ತ ಆಸಕ್ತಿ ಜಾಸ್ತಿ ಇದ್ದಿದ್ರಿಂದ ಅಜ್ಜ ಪುಟ್ಟು ನಾರಾಯಣ ಭಟ್ ರಿಂದ ಪ್ರಾಥಮಿಕವಾಗಿ ಭಾಗವತಿಕೆಯನ್ನು ಕಲಿತ್ರು. ನಂತರ ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿಕೇಂದ್ರದಲ್ಲಿ ಗುರು ಮಾಂಬಾಡಿ ನಾರಾಯಣ ಭಾಗವತರ ಗರಡಿಯಲ್ಲಿ ಪಳಗಿದ್ರು. ತಮ್ಮ 16 ನೇ ವಯಸ್ಸಿನಲ್ಲೇ ಚೌಡೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ ವೇದಿಕೆ ಏರಿದ ಗಣಪಣ್ಣ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ... ನಂತರ ಸುಮಾರು 26 ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ...ಅದ್ರಲ್ಲು ಸುಮಾರು 15-16 ವರ್ಷ ಅವರೇ ಹೇಳುವಂತೆ ರಾತ್ರಿ 9 ಕ್ಕೆ ವೇದಿಕೆ ಏರಿದ್ರೆ ಬೆಳಗ್ಗೆ ಪ್ರಸಂಗ ಮುಗಿಯೋವರೆಗೆ ಇವರೊಬ್ಬರೇ ಭಾಗವತರು.. ಇದು ಸಾಧ್ಯಾನಾ ಅಂತ ನಿಮಗೆ ಆಶ್ಚರ್ಯ ವಾಗಬಹುದು ಇದು ನಿಜ..ಜತೆಗೆ ಈ 15-16 ವರ್ಷಗಳ ಕಾಲವೂ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ. ಇದು ಯಕ್ಷಗಾನದ ಬಗ್ಗೆ ಅವರಿಗಿರೋ ಪ್ರೀತಿಯನ್ನು ತೋರಿಸುತ್ತೆ,,,ಪದ್ಯಾಣ ಪರಂಪರೆಯನ್ನು ಉಳಿಸಬೇಕು ಬೆಳೆಸಬೇಕು ಅನ್ನೋ ಅವರ ತುಡಿತ ಕಾಣುತ್ತದೆ. ಇನ್ನು ಅವರ ಭಾಗವತಿಕೆಯ ಬಗ್ಗೆ ಹೇಳಬೇಕಂದರೆ ಸಂಗೀತದದ ಜ್ನಾನ ಕೂಡಾ ಅವರಿಗೆ ಇದ್ದದ್ದರಿಂದ ಯಕ್ಷಗಾನದಲ್ಲಿ ಬಳಸೋ 32 ರಾಗಗಳಲ್ಲಿ ಯಾವುದೇ ರಾಗ ವಾದರೂ ಸರಿ ಲೀಲಾಜಾಲವಾಗಿ ಹಾಡುವ ಕಲೆ ಕರಗತವಾಗಿತ್ತು ಬೇರೆ ಬೇರೆ ರಾಗಗಳನ್ನು ಯಕ್ಷಗಾನದಲ್ಲಿ ಬಳಸಿ ಯಶಸ್ಸನ್ನೂ ಕೂಡಾ ಕಂಡಿದ್ದರು. ಇನ್ನು ಯಕ್ಷಗಾನದಲ್ಲಿ ಪ್ರಮುಖವಾಗಿ ಪ್ರಸಂಗವನ್ನು ತೆಗೆದುಕೊಂಡು ಹೋಗುವುದು, ಅಂದ್ರೆ ಪ್ರಸಂಗದ ನಿರ್ದೇಶಕರು ಯಾವಾಗಲೂ ಭಾಗವತರೇ ಆಗಿರುತ್ತಾರೆ...16 ನೇ ವಯಸ್ಸಿನಂದಲೇ ಯಕ್ಷಗಾನ ಲೋಕಕ್ಕೆ ಬಂದಿದ್ದರಿಂದಾಗಿ ಪ್ರಸಂಗದ ಮೇಲಿನ ಹಿಡಿತ ಗಣಪಣ್ಣನವರಿಗೆ ಅದ್ಭುತವಾಗಿತ್ತು..ಕುಂಡಾವು ಮೇಳ ,ಸುರತ್ಕಲ್ ಮೇಳ, ಕರ್ನಾಟಕ ಮೇಳ, ಹೊಸನಗರ, ಎಡನೀರು, ಹನುಮಗಿರಿ ಮೇಳ ಸೇರಿದಂತೆ ಹಲವು ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿರೋ ಪದ್ಯಾಣರು 5 ದಶಕಗಳಲ್ಲಿ ಸೃಷ್ಟಿಸಿದ್ದು ಇತಿಹಾಸ. ಅದರಲ್ಲೂ ಸುರತ್ಕಲ್ ಮೇಳದಲಲಿದ್ದಾಗ ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ರಾಜಾ ಯಯಾತಿ ಹೀಗೇ ಹಲವಾರು ಪ್ರಸಂಗಗಳು ಪದ್ಯಾಣ ರಿಂದಾಗಿಯೇ ಜನಪ್ರಿಯವಾಗಿದ್ದವು. ಇನ್ನು ಗಣಪಣ್ಣನ ಕೆಲವೊಂದು ಹಾಡುಗಳು ಅದ್ರಲ್ಲಿ ರಾಮಾಂಜನೇಯ ಪ್ರಸಂಗದ ರೇವತಿ ರಾಗದಲ್ಲಿರೋ ಸ್ಮರಿಸಯ್ಯ ರಾಮ ಮಂತ್ರ ಹಾಡು ಒಮ್ಮೆ ಕೇಳಿದ್ರೆ ಸದಾ ಕಾಲ ಕಿವಿಯಲ್ಲಿ ಅನುರಣಿಸ್ತಾನೇ ಇರತ್ತೆ. ಅದೇ ರೀತಿ, ಕೋಮಲಾಂಗಿ ಕೇಳೆ ಮದಗಜಗಾಮಿನಿ ಪಾಂಚಾಲೆ, ದೇವ ಗಾಂಧಾರ ರಾಗದಲ್ಲಿ ಹಾಡುವ ದುರಿತವನ ದಾವಾಗ್ನಿ , ಶುದ್ಧ ಸಾವೇರಿ ರಾಗದ ನೀವು ಜಗದ ಅಧಿದೈವ ವೆನ್ನುವ ನಾವು ಬಲ್ಲೆವು, ಕುಮಾರ ವಿಜಯದ ಆನಂದ ಮುಖಿ ಸುಂದರಾಂಗಿ ಮಂದಗಾಮಿನಿ, ದೇವಿ ಮಾಹತ್ಮೆಯ ನೋಡಿದನು ಕಲಿ ರಕ್ಷ ಬೀಜನು ...ಅಬ್ಬಾ ಹೇಳ್ತಾ ಹೋದ್ರೆ ಅದೆಷ್ಟು ಹಾಡುಗಳು ಈ ಎಲ್ಲಾ ಹಾಡುಗಳಲ್ಲಿ ತಮ್ಮದೇ ಅಚ್ಚು ಹಾಕಿಟ್ಟಿದ್ದಾರೆ ಪದ್ಯಾಣ ಗಣಪಣ್ಣ.. ಹೀಗೇ ಅವರು ಬಿಟ್ಟು ಹೋದ ಈ ನೆನಪುಗಳು ಯಕ್ಷಗಾನ ಪ್ರಿಯರ ಹೃದಯದಲ್ಲಿ ಅಚ್ಚಳಿಯದೇ ಉಳಿಯೋದ್ರಲ್ಲಿ ಎರಡು ಮಾತಿಲ್ಲ. ಒಂದು ಸಣ್ಣ ಅಪಘಾತದ ನಂತ್ರ ಭಾಗವತಿಕೆಯನ್ನು ಸ್ವಲ್ಪ ಕಡಿಮೆ ಮಾಡಿದ್ರು ನಿಜ...ಆದ್ರೆ ಅವರಿಗೆ ಇಹಲೋಕ ತೊರೆಯು ವಯಸ್ಸಂತೂ ಖಂಡಿತ ಆಗಿರ್ಲಿಲ್ಲ...ಇಷ್ಟು ಬೇಗ ಇಹಲೋಕದಲ್ಲಿ ಗಾನ ಯಾತ್ರೆಯನ್ನು ಮುಗಿಸಿ ನಮ್ಮೆಲ್ಲರ ಪ್ರೀತಿಯ ಗಣಪಣ್ಣ ಹೋಗ್ತಾರೆ ಅಂತಾ ಅಂದುಕೊಂಡಿರ್ಲಿಲ್ಲ..ಬಹುಷಃ ತ್ರಿಮೂರ್ತಿಗಳಿಗೆ ಹಾಗೂ ಸ್ವರ್ಗ ಲೋಕದಲ್ಲಿರೋ ಇಂದ್ರಾದಿ ದೇವತೆಗಳಿಗೆ, ಗಣಪಣ್ಣ ನವರ ಭಾಗವತಿಕೆಯನ್ನು ಕೇಳ ಬೇಕು, ರಂಭಾದಿ ನಾರಿಯರಿಗೆ ಗಣಪಣ್ಣನವರ ಭಾಗವತಿಕೆಗೆ ನಾಟ್ಯ ಮಾಡಬೇಕು ಅನ್ನೋ ಆಸೆಯಾಯ್ತೋ ಏನೋ..ಅದಕ್ಕೆ ಬೇಗ ಕರೆಸಿಕೊಂಡ್ರೋ ಏನೋ ಅಂತಾ ಅನ್ನಿಸ್ತಿದೆ...ಆದ್ರೆ ಗಣಪಣ್ಣ ಯಕ್ಷಗಾನ ಕ್ಷೇತ್ರದಲ್ಲಿ ಹಾಕಿಕೊಟ್ಟ ಪರಂಪರೆ, ಶೈಲಿ, ಯಕ್ಷಗಾನಕ್ಕೋಸ್ಕರ ಕೊನೇ ಕ್ಷಣದವರೆಗೂ ತುಡಿದ ರೀತಿ, 16 ವರ್ಷಗಳ ಕಾಲ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯದೇ ರಾತ್ರಿ ಇಂದ ಬೆಳಗಿನ ವರೆಗೆ ಭಾಗವತಿಕೆ ಮಾಡ್ತಾ ಯಕ್ಷಗಾನವನ್ನು ಬೆಳೆಸಿದ ರೀತಿ ಎಲ್ಲರಿಗೂ ಆದರ್ಶ ಪ್ರಾಯವಾದದ್ದು.. ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಬಂದಿದ್ದು, ಈ ಟಿವಿ ಕನ್ನಡದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಹೋಗಿ ಅಲ್ಲಿ ಭಾಗವತಿಕೆ ಮಾಡಿ ಖ್ಯಾತ ಗಾಯಕ ಎಸ್ ಪಿಬಿಯೇ ಹುಬ್ಬೇರುವಂತೆ ಮಾಡಿದ್ರು. ಅಷ್ಟೇ ಅಲ್ಲದೆ ವಿದೇಶಗಳಲ್ಲೂ ತಮ್ಮ ಕಂಠ ಮಾಧುರ್ಯವನ್ನು ಪಸರಿಸಿದ್ದನ್ನು ನೆನಪಿಸಿಕೊಳ್ಳಲೇ ಬೇಕು.
ಕೊನೆಯದಾಗಿ ಮೊನ್ನೆ ಮೊನ್ನೆ ಆಲ್ ಇಂಡಿಯಾ ರೇಡಿಯೋದಲ್ಲಿ ಸಂದರ್ಶನ ಕೊಟ್ಟಿದ್ರು ಅದರಲ್ಲಿ ..."ನನ್ನನ್ನು ಮೀರಿಸೋ ಶಿಷ್ಟರು ರೆಡಿಯಾಗಿದ್ದಾರೆ.... ಹಾಗಾಗಿ ನಾನು ಅನಿವಾರ್ಯವಲ್ಲ" ಅನ್ನೋ ಮಾತುಗಳು ..ಇವತ್ತು ನಿಜಕ್ಕೂ ಕಾಡುತ್ತದೆ, ಕಣ್ಣಂಚಲ್ಲಿ ನೀರು ತರಿಸುತ್ತದೆ. ಒಂದಂತೂ ನಿಜ ಯಕ್ಷಗಾನಕ್ಕೆ ಆಕಸ್ಮಿಕವಾಗಿ ಗಣಪಣ್ಣ ಬಂದಿದ್ರೂ..50 ವರ್ಷಗಳ ಕಾಲ ಯಕ್ಷಗಾನ ರಂಗದ ಉತ್ತುಂಗದಲ್ಲಿ ಮೆರೆದು ಹೋಗುವಾಗ ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಅವರ ಸಾಧನೆಗೆ ಹಿಡಿದ ಕನ್ನಡಿ. ಇನ್ಮುಂದೆ ಅವರ ಭಾಗವತಿಕೆ ರಂಗದ ಮೇಲೆ ಇರಲ್ಲ ಅನ್ನೋ ದುಃಖ ಇದ್ರೂ ಅವರು ಹಾಡಿದ ಹಾಡುಗಳಲ್ಲೇ ಅವರನ್ನು ಕಾಣಬೇಕು... ಹೋಗಿಬನ್ನಿ ಗಣಪಣ್ಣ.. ಯಕ್ಷಗಾನಂ ಗೆಲ್ಗೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.