

ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ತನ್ನ ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೊಸ ಯೂಸರ್ ನೇಮ್ (Username) ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಈ ಫೀಚರ್ ಜಾರಿಗೆ ಬಂದ ಬಳಿಕ, ಫೋನ್ ನಂಬರ್ ಹಂಚಿಕೊಳ್ಳದೆ ಕೇವಲ ಯೂಸರ್ ನೇಮ್ ಮೂಲಕವೇ ಇತರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ.
ಪ್ರಸ್ತುತ ವಾಟ್ಸಪ್‌ನಲ್ಲಿ ಯಾರೊಂದಿಗಾದರೂ ಚಾಟ್ ಆರಂಭಿಸಲು ಅಥವಾ ಯಾವುದೇ ಗ್ರೂಪ್‌ಗೆ ಸೇರಲು ಫೋನ್ ನಂಬರ್ ಗೋಚರಿಸುವುದು ಅನಿವಾರ್ಯವಾಗಿದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಇನ್‌ಸ್ಟಾಗ್ರಾಮ್, ಎಕ್ಸ್ ಹಾಗೂ ಟೆಲಿಗ್ರಾಂ ಮಾದರಿಯಲ್ಲಿ ಪ್ರತಿಯೊಬ್ಬ ಬಳಕೆದಾರರೂ ತಮ್ಮದೇ ಆದ ವಿಶಿಷ್ಟ ಯೂಸರ್ ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಫೋನ್ ನಂಬರ್ ತಿಳಿಯದವರೂ ಸಹ ಯೂಸರ್ ನೇಮ್ ಹುಡುಕುವ ಮೂಲಕ ನಿಮಗೆ ಸಂದೇಶ ಕಳುಹಿಸಬಹುದಾಗಿದೆ.
ಇಷ್ಟದ ಯೂಸರ್ ನೇಮ್ ಆಯ್ಕೆ ಅವಕಾಶ
ಹೊಸ ಫೀಚರ್ ಮೂಲಕ ಬಳಕೆದಾರರು ತಮ್ಮ ಇಷ್ಟದ ಯೂಸರ್ ನೇಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯಲಿದೆ. ವಿಶಿಷ್ಟ ಯೂಸರ್ ನೇಮ್‌ಗಳನ್ನು ಮೊದಲು ಆಯ್ಕೆ ಮಾಡಿದವರಿಗೆ ಆದ್ಯತೆ ಸಿಗಲಿದ್ದು, ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವಾಗ ವೈಯಕ್ತಿಕ ಮೊಬೈಲ್ ನಂಬರ್ ಬಹಿರಂಗವಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.
4 ಅಂಕಿಯ ಪಿನ್ ಭದ್ರತೆ
ಗೌಪ್ಯತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ವಾಟ್ಸಪ್ 'ಯೂಸರ್ ನೇಮ್ ಪಿನ್' ಎಂಬ ಹೊಸ ಭದ್ರತಾ ವೈಶಿಷ್ಟ್ಯವನ್ನೂ ಪರಿಚಯಿಸುತ್ತಿದೆ. ಇದರಡಿ, ಯಾರಾದರೂ ಮೊದಲ ಬಾರಿಗೆ ನಿಮ್ಮ ಯೂಸರ್ ನೇಮ್ ಮೂಲಕ ಸಂಪರ್ಕಿಸಲು ಬಯಸಿದರೆ, ನೀವು ನಿಗದಿಪಡಿಸಿರುವ 4 ಅಂಕಿಯ ರಹಸ್ಯ ಪಿನ್ ಅನ್ನು ನಮೂದಿಸಬೇಕಾಗುತ್ತದೆ. ಇದರಿಂದ ಅನಗತ್ಯ ಸ್ಪ್ಯಾಮ್ ಸಂದೇಶಗಳನ್ನು ತಡೆಯಲು ಸಹಾಯವಾಗಲಿದೆ.
ಬಳಕೆದಾರರಿಗೆ ಏನು ಲಾಭ?
ಈ ಹೊಸ ವ್ಯವಸ್ಥೆಯಿಂದ ವೃತ್ತಿಪರ ಕೆಲಸಗಳು, ಸಾರ್ವಜನಿಕ ಗ್ರೂಪ್‌ಗಳು ಅಥವಾ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವ ಸಂದರ್ಭಗಳಲ್ಲಿ ಮೊಬೈಲ್ ನಂಬರ್ ಹಂಚಿಕೊಳ್ಳುವ ಅಗತ್ಯ ಕಡಿಮೆಯಾಗಲಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆ ಹಾಗೂ ವೈಯಕ್ತಿಕ ಮಾಹಿತಿಯ ಗೌಪ್ಯತೆ ಹೆಚ್ಚಿಸಲು ಈ ವೈಶಿಷ್ಟ್ಯ ನೆರವಾಗಲಿದೆ. ಯೂಸರ್ ನೇಮ್ ತಿಳಿದಿದ್ದರೂ ನಿಮ್ಮ ಅನುಮತಿಯಿಲ್ಲದೆ ಯಾರಿಗೂ ನಿಮ್ಮ ಫೋನ್ ನಂಬರ್ ಗೋಚರಿಸುವುದಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.