



ಕಾರ್ಕಳ:
"ಸ್ವಚ್ಛತೆ ಎಂಬುದು ಕೆಲಸವಲ್ಲ ನಮ್ಮ ಕರ್ತವ್ಯ" ಎನ್ನುವ ಮನೋಭಾವನೆಯೊಂದಿಗೆ ಸ್ವಪ್ರೇರಣೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕಾರ್ಕಳ ತಾಲೂಕಿನ ತೆಳ್ಳಾರು ಎಂಬ ಪುಟ್ಟ ಹಳ್ಳಿಯಲ್ಲಿ "ಹಸಿರೇ ಉಸಿರು" ಎಂಬ ಸಂಘಟನೆಯು ಪ್ರತೀ ಆದಿತ್ಯವಾರ ನಿಗದಿತ ಸಮಯದಲ್ಲಿ ಒಂದರಿಂದ ಒಂದೂವರೆ ಗಂಟೆಗಳ ಕಾಲದ ಸಮಯವನ್ನು ಸ್ವಚ್ಛತಾ ಕಾರ್ಯಕ್ಕಾಗಿ ಮೀಸಲಿಟ್ಟಿದೆ. "ಸ್ವಚ್ಛ ಊರು-ಸ್ವಚ್ಛ ಗ್ರಾಮ" ಎನ್ನುವ ಪರಿಕಲ್ಪನೆ ಯೊಂದಿಗೆ ಪ್ರಾರಂಭಗೊಂಡ ಈ ಸಂಘಟನೆಯು ಸೆ.9 ರಂದು ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಹರ್ಷದಾಯಕ ವಿಚಾರ. ಈ ತಂಡವು ಶೈಕ್ಷಣಿಕ ಸಂಸ್ಥೆಗಳ ಆವರಣ, ಊರಿನ ದೇವಾಲಯ-ದೈವಸ್ಥಾನ, ಬಸ್ ನಿಲ್ಧಾಣಗಳು, ರಸ್ತೆ ಬದಿಗಳ ತ್ಯಾಜ್ಯ ಸಂಗ್ರಹಣೆ, ನದಿ- ಕೆರೆಗಳ ಸ್ವಚ್ಛತೆ, ಇತರ ಕಡೆಗಳಲ್ಲಿ ಸ್ವಚ್ಛತೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಯುವಕ ಯುವತಿಯರು ಮಾತ್ರವಲ್ಲದೆ ಸ್ವಇಚ್ಛೆಯಿಂದ ಪುಟಾಣಿ ಮಕ್ಕಳು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರ ಮಕ್ಕಳಿಗೂ ಮಾದರಿಯಾಗಿದ್ದಾರೆ. ಈ ಸಂಘಟನೆಯನ್ನು ಹುಟ್ಟುಹಾಕಿದ ಉದ್ದೇಶವೇ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಎನ್ನುವ ಕಲ್ಪನೆಯೊಂದಿಗೆ. ಆರಂಭದಲ್ಲಿ ಬೆರಳೆಣಿಕೆಯ ಸದಸ್ಯರು ಜೊತೆ ಸೇರಿ ಹುಟ್ಟುಹಾಕಿದ ಈ ಸಂಘಟನೆಯಲ್ಲಿ ಇಂದು ಇವರಿಂದ ಪ್ರೇರಿತರಾಗಿ ಬಹಳಷ್ಟು ಜನ ತಂಡದೊಳಕ್ಕೆ ಸೇರಿಕೊಂಡಿದ್ದಾರೆ. ಈ ಸಂಘಟನೆಯ ಕಾರ್ಯಾರಂಭದ ನಂತರ ಗ್ರಾಮಸ್ಥರಲ್ಲಿ ಪರಿಸರ ಜಾಗೃತಿಯೂ ಸ್ವಲ್ಪ ಮಟ್ಟಿಗೆ ಬೆಳೆದಿದೆ. ಸರಿ ಸುಮಾರು ಇಂದು ನಲುವತ್ತಕ್ಕೂ ಅಧಿಕ ಸದಸ್ಯರು ಈ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ. ತಂಡದ ಹುಟ್ಟು: "ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು" ಎಂಬ ಮಾತಿನಂತೆ ಚಿಕ್ಕದಾಗಿ ಕೆಲವೇ ಜನರು ಒಟ್ಟುಸೇರಿ ಹುಟ್ಟುಹಾಕಿದ ಈ ಸಂಘಟನೆಯು ಬಲಿಷ್ಠಗೊಂಡು ಸ್ವಚ್ಛತೆಗೆ ಒತ್ತು ನೀಡುತ್ತಿದ್ದಂತೆ ಊರ ಜನರು ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವುದು ಕಡಿಮೆಯಾಗಿದೆ. ಇದರಿಂದ ದುರ್ಗ ಗ್ರಾಮವನ್ನು ಸ್ವಚ್ಛ ಹಾಗೂ ಸುಂದರ ಗ್ರಾಮವನ್ನಾಗಿಸುವ ಕಾರ್ಯವು ಯಶಸ್ವಿಯಾಗಿ ಸಾಗುತ್ತಿದೆ ಎನ್ನಲಡ್ಡಿಯಿಲ್ಲ! ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಸ್ವಚ್ಛತೆಗೆ ವಿರಾಮ ಘೋಷಿಸಿದ್ದನ್ನು ಹೊರತು ಪಡಿಸಿ ತಂಡದ ಸದಸ್ಯರು ಕಳೆದ 127 ವಾರಗಳಲ್ಲಿ ವಾರದ ಕಾಯಕ ವನ್ನು ನಿಷ್ಠೆಯಿಂದ ನಿರ್ವಹಿಸುತ್ತ ಬಂದಿರುತ್ತಾರೆ. ಸ್ವರ್ಣಾನದಿ ತಟವನ್ನು ಸ್ವಚ್ಘಗೊಳಿಸಿ ವಿವಿಧ ಸಂಘಟನೆ ಗಳ ಸಹಭಾಗಿತ್ವ ದೊಂದಿಗೆ ನದಿಗೆ ಆರತಿ ಬೆಳಗಿ ಬಾಗಿನ ಸಮರ್ಪಣೆ ಯಂತಹ ವಿಶೇಷ ಕಾರ್ಯಕ್ರಮ ವನ್ನು ಹಮ್ಮಿಕೊಂಡಿರುವುದು ಸವಿ ನೆನಪಾಗಿ ಉಳಿದಿರುತ್ತದೆ. ಸ್ವರ್ಣಾರಾಧನಾ ತಂಡದ ವತಿಯಿಂದ 2020- 21ನೇ ಸಾಲಿನಲ್ಲಿ ನಡೆಸಲಾದ ಸ್ವರ್ಣಾನದಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ನದಿ ಪಾತ್ರದಲ್ಲಿ ಅತೀ ಹೆಚ್ಚು ತ್ಯಾಜ್ಯ ಸಂಗ್ರಹಿಸಿದ ತಂಡ ಎಂಬ ಕೀರ್ತಿಯೊಂದಿಗೆ ಪ್ರಶಸ್ತಿ ಯನ್ನು ಕಾರ್ಕಳದ ಶಾಸಕರ ಕೈಯಿಂದ ಸ್ವೀಕರಿಸಲಾಗಿದ್ದು ತಂಡದ ಹೆಗ್ಗಳಿಕೆ! ಇತ್ತೀಚಿನ ದಿನಗಳಲ್ಲಿ ನಡೆದಂತಹ ಅದ್ದೂರಿಯ ಕಾರ್ಕಳೋತ್ಸವದಲ್ಲಿ ಹಸಿರೇ ಉಸಿರು ತಂಡವು ನಗರ ಸ್ವಚ್ಛತಾ ಕಾರ್ಯವನ್ನು ಸ್ವಯಂಸ್ಪೂರ್ತಿ ಯೊಂದಿಗೆ ನಡೆಸಿತ್ತು. 75 ನೇ ಸ್ವಾತಂತ್ರೋತ್ಸವದ ಅಂಗವಾಗಿ 75 Freedom park ನಿರ್ಮಿಸಬೇಕೆನ್ನುವ ಸಂಘಟಕರ ಅಪೂರ್ವ ಪರಿಕಲ್ಪನೆಗೆ ಕೈ ಜೋಡಿಸಿದ ಈ ತಂಡವು 75 ವಿಧದ ಗಿಡಗಳನ್ನು ನೆಡುವ ಮೂಲಕ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ/ ಅರ್ಥಪೂರ್ಣವಾಗಿ ಆಚರಿಸಿಕೊಂಡಿತು. ತಂಡದ ಸದಸ್ಯರು ಜೊತೆಸೇರಿ ಹಲವಾರು ಬಾರಿ ಹೊರ ಊರುಗಳಲ್ಲಿ ಸ್ವಚ್ಛತೆ - ಚಾರಣ- ಯಾನ ಎನ್ನುವ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜೊತೆಗೆ ಮನೋರಂಜನೆ ಅನುಭವಿಸಿರುತ್ತಾರೆ. ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸರಕಾರಿ ಸವಲತ್ತು ವಿತರಣಾ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಸಹಭಾಗಿತ್ವ ವಹಿಸಿರುತ್ತಾರೆ. ಸಂಘಟನೆಗೆ ಮೂರನೇ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ತಂಡದ ಸದಸ್ಯರು ನೇತ್ರಾದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ತಂಡದ ಉದ್ದೇಶ: ಯಾವುದೇ ಒಂದು ಒಳ್ಳೆಯ ಕಾರ್ಯವನ್ನು ಕೈಗೊಳ್ಳುವಾಗ ಕೆಲವೊಂದು ಉದ್ದೇಶಗಳನ್ನು ಅಳವಡಿಸಿಕೊಳ್ಳುವುದು ಪ್ರಗತಿಪರ ಸಂಘಟನೆಯ ಲಕ್ಷಣ. ಅಂತೆಯೇ ಈ ಸಂಘಟನೆಯೂ ತಮ್ಮೂರ ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ಸ್ವಚ್ಛ ಊರು-ಸುಂದರ ಗ್ರಾಮದ ನಿರ್ಮಾಣ ಇವರ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರಲ್ಲಿ ಪರಿಸರದ ಬಗೆಗಿನ ಕಾಳಜಿ, ಪ್ರೀತಿಯನ್ನು ಹುಟ್ಟುಹಾಕಿ ಪ್ರತಿಯೊಬ್ಬರೂ ತಮ್ಮ ಪರಿಸರದ ರಕ್ಷಣೆಯಲ್ಲಿ ತೊಡಗಿಸಿ ಕೊಳ್ಳ ಬೇಕೆನ್ನುವುದು ಇವರ ಆಶಯ.
ತಂಡದ ಮುಂದಿನ ಯೋಜನೆ: ಮುಂದಿನ ದಿನಗಳಲ್ಲಿ ಪರಿಸರ ಸ್ವಚ್ಛತೆ/ ಸಂರಕ್ಷಣೆಗೆ ಒತ್ತು ನೀಡುವುದರ ಜೊತೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳ ನಾಟಿ- ಹಸಿರುವನ ನಿರ್ಮಾಣ, ಶಾಲಾ ವಿದ್ಯಾರ್ಥಿಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಜಾಗೃತಿ ಮಾಹಿತಿ ಶಿಬಿರಗಳನ್ನು ಏರ್ಪಡಿಸುವುದು, ತಜ್ಞ ವೈದ್ಯರಿಂದ ಗ್ರಾಮಸ್ಥರಿಗೆ ಉಚಿತ ಆರೋಗ್ಯ ಶಿಬಿರ ನಡೆಸುವುದು, ಕೆರೆ-ನದಿ ಪಾತ್ರಗಳ ಸ್ವಚ್ಛತೆ-ಶುದ್ಧತೆಗೆ ಒತ್ತು ನೀಡುವುದು ಇಂತಹ ಹಲವಾರು ಕನಸಗಳು ತಂಡದ ಮುಂದಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.