

ಮಂಗಳೂರು/ಉಡುಪಿ: ಭಾರತ ಹವಾಮಾನ ಇಲಾಖೆ (ಐಎಂಡಿ) ಹವಾಮಾನ ತಜ್ಞರ ಪ್ರಕಾರ, ಜುಲೈ 4ರಿಂದ 10ರವರೆಗೆ ಕರಾವಳಿ ಭಾಗದಲ್ಲಿ ಮತ್ತೆ ವ್ಯಾಪಕ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ.
ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 4.96 ಮೀಟರ್, ಉಪ್ಪಿನಂಗಡಿಯಲ್ಲಿ 24.5 ಮೀಟರ್, ಪುಲಿಕುಕ್ಕುನಲ್ಲಿ ಕುಮಾರಧಾರ ನದಿ 78.5 ಮೀಟರ್ ಹಾಗೂ ಅಡ್ಡೂರಿನಲ್ಲಿ ಗುರುಪುರ ನದಿ 1.96 ಮೀಟರ್ ಮಟ್ಟದಲ್ಲಿ ಹರಿಯುತ್ತಿದೆ.
ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ದಂಡೆಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಜುಲೈ 4ರಿಂದ 10ರವರೆಗೆ ಕರಾವಳಿ ಭಾಗದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಸಮುದ್ರ ಪ್ರಕ್ಷುಬ್ಧವಾಗುವ ನಿರೀಕ್ಷೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ವಿಪತ್ತು ನಿರ್ವಹಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೂಡ ರೆಡ್ ಅಲರ್ಟ್ ಜಾರಿಯಲ್ಲಿದ್ದರೂ, ಹಗಲಿನಲ್ಲಿ ಬಿಸಿಲಿನೊಂದಿಗೆ ಸಾಧಾರಣ ಮಳೆಯಾಗಿದ್ದು, ಸಂಜೆಯ ವೇಳೆಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹಗುರದಿಂದ ಮಧ್ಯಮ ಪ್ರಮಾಣದ ಮಳೆ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.