logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹೆಬ್ರಿ:108ನೇ ಕ. ಸಾ. ಪ. ಸಂಸ್ಥಾಪನಾ ದಿನಾಚರಣೆ

ಟ್ರೆಂಡಿಂಗ್
share whatsappshare facebookshare telegram
6 May 2022
post image

ಹೆಬ್ರಿ :ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜೆಲ್ಲೆ, ಹೆಬ್ರಿ ತಾಲೂಕು ಘಟಕದ ಆಶ್ರಯದಲ್ಲಿ 108ನೇ ಕ. ಸಾ. ಪ. ಸಂಸ್ಥಾಪನಾ ದಿನಾಚರಣೆ ಮತ್ತು ಗೌರಪುರ ದೊಡ್ಡ ಮಲ್ಲಯ್ಯ ಮರುಳಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ ವರಂಗ ಭಾರದ್ವಾಜ ವೇದಿಕೆಯಲ್ಲಿ ಮೇ.5ರಂದು ನಡೆಯಿತು.

ರಾಜ್ಯಾದಂತ್ಯ ಕ. ಸಾ. ಪ. ಸಂಸ್ಥಾಪನಾ ದಿನಾಚರಣೆ ಮೇ 5ರಂದು ನಡೆಯುತ್ತಿದ್ದು 108ನೇ ವರ್ಷಗಳ ಸಂಭ್ರಮಾಚಾರಣೆ ಆಗಿದೆ. ಕನ್ನಡ, ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ ಹಲವು ಮಹನೀಯರು ನೆರವಾಗಿದ್ದಾರೆ. ಮತ್ತು ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಕಾರ್ಯಕ್ರಮವಾಗಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಎಲ್ಲರೂ ಪುಷ್ಪ ನಮನ ಮಾಡಿ ನಮಿಸಿದರು. ಹಿರಿಯರಾದ ಊರಿನ ಗರಡಿ ಅರ್ಚಕರಾದ ವಿಠ್ಠಲ ಪೂಜಾರಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸುದೇಶ್ ಪ್ರಭು, ಗಣೇಶ್ ಶಿವಪುರ, ಶೈಲಜಾ ಶಿವಪುರ ಇವರಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಶ್ರೀ ಸಾಮಾನ್ಯನ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಬೀರಿದ ಪ್ರಭಾವ ವಿಷಯದ ಬಗ್ಗೆ ಶ್ರೀ ತರಳಬಾಳು ಜಗದ್ಗುರು ಪ. ಪೂ. ಕಾಲೇಜು ಉಪನ್ಯಾಸಕ ಶರತ್. ಆರ್. ಉಪನ್ಯಾಸ ನೀಡಿ, ಕನ್ನಡವು ನಮ್ಮ ಬದುಕಿನ ಭಾಗ . ನಮ್ಮ ಆಲೋಚನೆ, ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ, ಬದುಕು. ಬರಹ ಎಲ್ಲಡೆಯೂ ಕನ್ನಡವಿದೆ. ಕನ್ನಡ ನಮ್ಮ ಅಸ್ಮಿತೆ.ನಾಲ್ವಡಿ ಕೃಷ್ಣರಾಜ್ ಒಡೆಯರ್ ಕ. ಸಾ. ಪ. ಸಂಸ್ಥಾಪಕರಾಗಿದ್ದು ಅವರ ಆಶಯಗಳನ್ನು ಕನ್ನಡಿಗರು ಸಾಕಾರಗೊಳಿಸಬೇಕು. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಿಂದ ಹೋಬಳಿ ಮಟ್ಟದಲ್ಲಿ ಕ. ಸಾ. ಪ. ಘಟಕದ ಕಾರ್ಯಕ್ರಮ ನಡೆಸಿ ಕನ್ನಡದ ಕಂಪನ್ನು ಮೂಲೆ ಮೂಲೆಗೆ ಪಸರಿಸಿ ಶ್ರೀಸಾಮಾನ್ಯನೂ ಘಟಕದ ಸದಸ್ಯತ್ವ ಪಡೆಯುವಂತಾಗಬೇಕು. ಕೇವಲ ಕೆಲವೇ ಜನರ ಸಂಸ್ಥೆಯಾಗಬಾರದು. ಕನ್ನಡ ಮಾತನಾಡುವ,ಓದು, ಬರಹ, ಬಲ್ಲವರಾಗಿದ್ದು 18ವರ್ಷ ಮೇಲ್ಪಟ್ಟ ಎಲ್ಲರೂ ಘಟಕದ ಸದಸ್ಯರಾಗಬಹುದು .ಸಾಹಿತ್ಯ ಅಭಿಮಾನಿಗಳೆಲ್ಲರೂ ಒಟ್ಟಾಗಿ ಬೆರೆತು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ.ಹಿರಿಯ ಸಾಹಿತಿಗಳು ರಚಿಸಿದ ಕೃತಿಗಳು ಕಡಿಮೆ ಮಾರಾಟಬೆಲೆಗೆ ದೊರಕುವುದರಿಂದ ಈಗ ಕೊಂಡು ಕೊಂಡು ಓದುವವರ ಸಂಖ್ಯೆ ಹೆಚ್ಚಾಗಿದೆ. .ಘಟಕದಿಂದ ಸಮಾಜಮುಖಿ ಕೆಲಸ ಹೆಚ್ಚೆಚ್ಚು ನಡೆದು ಶ್ರೀಸಾಮಾನ್ಯನ ಬದುಕು ಹಸನಾಗಿ ಎಲ್ಲಡೆಯೂ ಕನ್ನಡಮಯ ವಾಗಬೇಕು ಎಂದು ಹೇಳಿದರು.

ಹಿಮ್ಮೇಳ, ಕುಣಿತ,ಅರ್ಥಗಾರಿಕೆ,ವೇಷ ಭೂಷಣಗಳನ್ನೊಳಗೊಂಡ ಒಂದು ಶಾಸ್ತ್ರೀಯ, ವಿಶಿಷ್ಟವಾದ ಆರಾಧನಾ ಕಲೆ ಯಕ್ಷಗಾನ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಯಕ್ಷಗಾನ ವೆಂಬ ಹೆಸರಿನ ಉಲ್ಲೇಖವಿದೆ. ಮುಂದೆ ಅದು ಬಯಲಾಟ, ದಶಾವತಾರ, ಪಾರಿಜಾತ ಎಂಬ ಹೆಸರುಗಳಿಂದ ಕರೆಯಲ್ಪಟ್ಟಿತು. ಬಯಲಿನಲ್ಲಿ ರಾತ್ರಿ ಇಡೀ ನಡೆಯುವ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಬಯಲಾಟ ವೆಂಬ ಹೆಸರು ಬಂತು. ತೆಂಕು ತಿಟ್ಟು,ಬಡಗುತಿಟ್ಟು, ಬಡಾ ಬಡಗು ಎಂಬ ಮೂರು ವಿಭಾಗಗಳಿವೆ. ವಿಷ್ಣುವಿನ ಹತ್ತು ಅವತಾರಗಳನ್ನು ತಿಳಿಸುವ ಪ್ರಸಂಗಗಳು ಯಕ್ಷಗಾನದಲ್ಲಿ ನಾವು ಕಾಣಬಹುದು. ಆದ ಕಾರಣ ಮೇಳಗಳ ಹೆಸರಲ್ಲಿ ದಶಾವತಾರ ಮೇಳ ಎಂಬ ಹೆಸರು ಬಂದಿದೆ.ಈಗ ಯಕ್ಷಗಾನ ವ್ಯಾಪಾರಿಕರಣವಾಗುತ್ತಿದೆ.ವಿದ್ಯುತ್ ದೀಪಾಲಂಕಾರದ ಬೆಳಕಿನಲ್ಲಿ ಯಕ್ಷಗಾನ ನಡೆಯುತ್ತಿದೆ . ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಕಾಲಕ್ಕೆ ತಕ್ಕಂತೆ ನಾವು ಒಗ್ಗಿ ಕೊಳ್ಳಬೇಕಾಗಿದೆ. ಬ್ಯಾಂಡ್ ಯಕ್ಷಗಾನಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದರೂ ಕೆಲವೊಂದು ಮಾರ್ಪಾಡುಗಳು ಅನಿವಾರ್ಯವಾಗಿದೆ. ಮಹಿಳೆಯರು ಯಕ್ಷಗಾನದಲ್ಲಿ ತೊಡಗಿಸಿಕೊಂಡು ಸಾಮರ್ಥ್ಯ ಪ್ರದರ್ಶಿಸುವುದು ಶುಭ ಸೂಚನೆಯಾಗಿದೆ. ಕಲಾವಿದರು ತನ್ನ ಪಾತ್ರಕ್ಕೆ ಮಾತ್ರ ಸೀಮಿತವಾಗದೆ ನಿರಂತರ ಕಲಿಕೆಯಿಂದ ಯಕ್ಷಗಾನದ ವಿವಿಧ ರಂಗದಲ್ಲಿ ಪಳಗಬೇಕಾಗಿದೆ. ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಕೇವಲ ಮನೋರಂಜನೆ ಮಾತ್ರವಾಗಿರದೆ ಒಂದು ಸಾಮಾಜಿಕ ಸಂದೇಶ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನೆಲೆಯಲ್ಲಿಯೂ ಸಹ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಯಕ್ಷಗಾನ ಬಯಲಾಟದ ಬಗ್ಗೆ ದತ್ತಿ ಉಪನ್ಯಾಸ ನೀಡುತ್ತಾ, ಶಿಕ್ಷಕ, ಯಕ್ಷ ಸಾಹಿತಿ ಪಿ.ವಿ. ಆನಂದ ಸಾಲಿಗ್ರಾಮ ಹೇಳಿದರು.

ಹೆಬ್ರಿ ತಾಲೂಕು ಕ. ಸಾ. ಪ. ಅಧ್ಯಕ್ಷ ಶ್ರೀನಿವಾಸ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವರಂಗದಲ್ಲಿ ಇವತ್ತು ಕಾರ್ಯಕ್ರಮ ನಡೆಯಬೇಕಾದರೆ ರಾಮಚಂದ್ರ ಭಟ್ ಮತ್ತು ವೀಣಾ ಆರ್. ಭಟ್ ತನ್ನ ಮನೆಯ ಅಂಗಳವನ್ನೇ ವೇದಿಕೆಯನ್ನಾಗಿ ಮಾಡಿ ಉಪಚಾರ ಮಾಡಿ ಸಹಕರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಪ್ರತಿ ತಿಂಗಳು ಸಭೆಗಳನ್ನು ಆಯೋಜಿಸಿ ಸಾಹಿತ್ಯ ಚಟುವಟಿಕೆಗಳಿಗೆ ಮತ್ತು ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದೇ ಕ. ಸಾ. ಪ. ದ ಉದ್ದೇಶವಾಗಿದೆ. 5ವರ್ಷದೊಳಗೆ ಸದಸ್ಯರ ಸಂಖ್ಯೆಯನ್ನು ಸದಸ್ಯತನ ಅಭಿಯಾನದ ಮೂಲಕ 1000ಕ್ಕೆ ಹೆಚ್ಚಿಸಬೇಕಾಗಿದೆ. ಘಟಕಕ್ಕೆ ಮುಂದಿನ ದಿನಗಳಲ್ಲಿ ಸಾಹಿತ್ಯಾಭಿಮಾನಿಗಳ ಬೆಂಬಲವನ್ನು ಕೋರುತ್ತಿದ್ದೇನೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಶರತ್ ಆರ್. ಮತ್ತು ಪಿ. ವಿ. ಆನಂದ ಸಾಲಿಗ್ರಾಮ ಹಾಗೂ ಸ್ಥಳಾವಕಾಶ ನೀಡಿದ ರಾಮಚಂದ್ರ ಭಟ್ ಮತ್ತು ವೀಣಾ ಆರ್. ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸತೀಶ್ ಆಚಾರ್ಯ ವರಂಗ ಅನಿಸಿಕೆ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉದ್ಯಮಿ ಯೋಗೀಶ್ ಭಟ್ ಹೆಬ್ರಿ, ಕ. ಸಾ ಪ ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದು ಶುಭ ಹಾರೈಸಿ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ಸ್ವಾಗತಿಸಿ, ಶಿಕ್ಷಕ ಮಂಜುನಾಥ್ ಶಿವಪುರ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಮಹೇಶ್ ಹೈಕಾಡಿ ವಂದಿಸಿದರು. ಕ. ಸಾ. ಪ ದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.